ದಶಕ ಕಳೆದರೂ ಅನುಷ್ಠಾನಗೊಳ್ಳದ ಒಳಚರಂಡಿ ಯೋಜನೆ!

| Published : Jan 30 2024, 02:02 AM IST

ಸಾರಾಂಶ

ಕುಶಾಲನಗರ ಪಟ್ಟಣದ ಹಾಲಿ ಇರುವ ಒಳಚರಂಡಿ ವ್ಯವಸ್ಥೆ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಈ ಯೋಜನೆಗೆ ಮೂರು ಬಾರಿ ಪೈಪೋಟಿಯಲ್ಲಿ ಭೂಮಿ ಪೂಜೆ ನಡೆದಿದೆ.

ವಿಶೇಷ ವರದಿಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪಟ್ಟಣದ ಹಾಲಿ ಇರುವ ಒಳಚರಂಡಿ ವ್ಯವಸ್ಥೆ ಇನ್ನೂ ಸಿದ್ಧವಾಗಿಲ್ಲ. ಸರ್ಕಾರದ ಪ್ರಮುಖ ಯೋಜನೆಯೊಂದು ಕಳೆದ ಹತ್ತು ವರ್ಷಗಳಿಂದ ಪೂರ್ಣಗೊಳ್ಳದೆ ಪಟ್ಟಣದ ಕಲುಷಿತ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿಗೆ ಸೇರುತ್ತಿದೆ.

2012ರಲ್ಲಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ಸುಮಾರು 40 ಕೋಟಿ ರು. ಮೊತ್ತದ ಯೋಜನೆ ರೂಪಿಸಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು.2014ರಲ್ಲಿ ಈ ಯೋಜನೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಅನುಷ್ಠಾನಕ್ಕೆ ತರಲು ಕಾಮಗಾರಿ ಪ್ರಾರಂಭವಾಗಿದ್ದು ದಶಕಗಳು ಕಳೆದರೂ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.ಮೂರು ಬಾರಿ ಭೂಮಿ ಪೂಜೆ!: ವಿಶೇಷವೆಂದರೆ ಈ ಯೋಜನೆಗೆ ಮೂರು ಬಾರಿ ಪೈಪೋಟಿಯಲ್ಲಿ ಭೂಮಿ ಪೂಜೆ ನಡೆದಿದ್ದು ಒಂದು ಬಾರಿ ಸ್ಥಳೀಯ ಪಂಚಾಯಿತಿ ನಡೆಸಿದರೆ ಇನ್ನೊಂದು ಬಾರಿ ಸ್ಥಳೀಯ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು. ನಂತರ ಅಂದಿನ ಕಾಂಗ್ರೆಸ್ ಸರ್ಕಾರದ ಪೌರಾಡಳಿತ ಸಚಿವರು ಆಗಿದ್ದ ವಿನಯ್ ಕುಮಾರ್ ಸೊರಕೆ ಮತ್ತು ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೂಡ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ್ದರು.

ಈ ಯೋಜನೆಗೆ ಗುತ್ತಿಗೆದಾರರನ್ನು ನೇಮಿಸಲಾಗಿದ್ದು 30 ತಿಂಗಳಲ್ಲಿ ಅಂದರೆ 2016 ರ ಆರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಲು ಅಂತಿಮ ಗಡುವು ನಿಗದಿಪಡಿಸಲಾಗಿತ್ತು.ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣದ ಗುರಿ ಹೊಂದಿದ ಈ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.

ಕೊಡಗು ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತಗಳು ಕೂಡ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಸಲುವಾಗಿ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕುಶಾಲನಗರ ಪಟ್ಟಣದ ಜನಸಂಖ್ಯೆ 2027 ಹಾಗೂ 2043 ಇಸವಿಯಲ್ಲಿ ಆಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ 2012 ರಲ್ಲಿ ಸರ್ಕಾರದಿಂದ ಅಂದಾಜು ಪಟ್ಟಿ ತಯಾರಿಸಲಾಗಿತ್ತು.

ನದಿ ಪಾಲಾಗಿದೆ ಕಾಮಗಾರಿ:

ಈ ಯೋಜನೆಗೆ ಕೊಳವೆಗಳ ಒಳಚರಂಡಿ ಕೊಳವೆ ಮಾರ್ಗ ಹಾಗೂ ಆಳು ಗುಂಡಿಗಳ ನಿರ್ಮಾಣ ಕಾಮಗಾರಿ ಮಾಡಿ ಹತ್ತು ವರ್ಷಗಳೇ ಕಳೆದಿದ್ದು ಕಾಮಗಾರಿ ಬಹುತೇಕ ಕಾವೇರಿ ನದಿ ಪಾಲಾಗಿದೆ.

ಪಟ್ಟಣದ ಶೌಚಾಲಯದ ತ್ಯಾಜ್ಯಗಳು ಸೇರಿದಂತೆ ಇಡೀ ಪಟ್ಟಣದ ಎಲ್ಲಾ ಕಲುಷಿತ ನೀರು ನೇರವಾಗಿ ಕಾವೇರಿ ನದಿ ಪಾಲಾಗುತ್ತಿದೆ. ನದಿ ತಟದಲ್ಲಿ ನಿಯಮ ಬಾಹಿರವಾಗಿ ಮಾಡಿರುವ ಈ ಕಾಮಗಾರಿ ಕಳೆದ 2018 ರಿಂದ 5 ನಿರಂತರ ವರ್ಷಗಳ ಕಾಲ ಪ್ರವಾಹದಲ್ಲಿ ಮುಳುಗಿ ಹೋಗಿದ್ದು ಯೋಜನೆಯ ಅಸಮರ್ಪಕತೆ ಕಾಣಿಸುತ್ತಿದೆ.

ಅಪೂರ್ಣ ಕೆಲಸಗಳು: ಎರಡನೇ ಹಂತದಲ್ಲಿ ಅಂದಾಜು ರು. 18 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತಾಂತ್ರಿಕತೆಯುಳ್ಳ ಮಲಿನ ನೀರು ಶುದ್ಧೀಕರಣ ಘಟಕ ಕಾಮಗಾರಿ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ಅಗತ್ಯವಿರುವ 11 ಕೆ ವಿ ವಿದ್ಯುತ್ ಮಾರ್ಗ ಕೂಡ ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ.ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿ ರಸ್ತೆಯಲ್ಲಿ ಕೂಡ ಪೈಪ್ ಅಳವಡಿಕೆ ಕಾಮಗಾರಿ ಇನ್ನೂ ನಡೆದಿಲ್ಲ.

ಯೋಜನೆಯ ನಂತರ ಅಧಿಕಾರಿಗಳು ಬದಲಾಗುತ್ತಲೇ ಇದ್ದು, ಕುಶಾಲನಗರದಲ್ಲಿ ಮಾತ್ರ ಈ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಒಳ ಚರಂಡಿ ಮಂಡಳಿ ಅಧಿಕಾರಿ ಮಾತ್ರ ಕಳೆದ ಹತ್ತು ವರ್ಷಗಳಿಂದ ಯೋಜನೆಯ ಬಗ್ಗೆ ಸ್ಥಳೀಯ ನಾಗರೀಕರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬುದು ನಾಗರಿಕರ ಆರೋಪ.

ಅಪೂರ್ಣಗೊಂಡಿರುವ ಕಾಮಗಾರಿಯ ಬಗ್ಗೆ ಹಲವು ಬಾರಿ ವರದಿಯಾಗಿದ್ದು ಜಿಲ್ಲಾಧಿಕಾರಿ ನಿರ್ದೇಶನ ಮೇರೆಗೆ ಹುಸಿ ಭರವಸೆ ನೀಡಿದ ಮಂಡಳಿಯ ಅಧಿಕಾರಿಗಳು 2022ರ ಮೇ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಡುವುದು ಖಚಿತ ಎಂದು ಅನುಪಾಲನ ವರದಿ ಸಲ್ಲಿಸಿದ್ದರು. ಇದಾಗಿ ಎರಡ ವರ್ಷ ಪೂರ್ಣಗೊಳ್ಳುತ್ತಿದ್ದರೂ ಯಾವುದೇ ಬದಲಾವಣೆ ಆಗಿಲ್ಲ.

ಪ್ರವಾಹ ಪಾಲಾದ ಪರಿಕರಗಳು:

ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಗುಮ್ಮನ ಕೊಲ್ಲಿ ತನಕ ಸುಮಾರು 4.5 ಕಿಲೋಮೀಟರ್ ಉದ್ದಕ್ಕೆ ಕಾವೇರಿ ನದಿಯ ಅಂಚಿನಲ್ಲಿ ಪೈಪುಗಳನ್ನು ಅಳವಡಿಸಲಾಗಿದ್ದು 2018 ರಿಂದ ಮೂರು ವರ್ಷಗಳ ಕಾಲ ಬಂದ ಪ್ರವಾಹದ ಹಿನ್ನೆಲೆಯಲ್ಲಿ ಕಾಮಗಾರಿ ಪರಿಕರಗಳು ಸಂಪೂರ್ಣ ನದಿ ಪಾಲಾದ ದೃಶ್ಯ ಕಾಣಬಹುದು.ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ 40 ಕೋಟಿ ರು.ವೆಚ್ಚದ ಕಾಮಗಾರಿ ಇದೀಗ 58 ಕೋಟಿಗೆ ಏರಿದೆ. ಆದರೆ ಕಾಮಗಾರಿ ಇನ್ನೂ ಶೇ.60 ರಷ್ಟೂ ಪೂರ್ಣಗೊಂಡಿಲ್ಲ.----ರಾಜ್ಯ ಸರ್ಕಾರದ ಶೇ.95 ಮತ್ತು ಸ್ಥಳೀಯ ಸಂಸ್ಥೆಯ ಶೇ.5 ಅನುದಾನದಲ್ಲಿ ಈ ಯೋಜನೆ ರೂಪಗೊಂಡಿದ್ದು ಇದೀಗ ಸರ್ಕಾರದಿಂದ ಸುಮಾರು 58 ಕೋಟಿ ರು. ಬಿಡುಗಡೆಯಾಗಿವೆ. ಈ ಯೋಜನೆ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಯೋಜನೆ ಪೂರ್ಣಗೊಂಡಲ್ಲಿ ನದಿಗೆ ನೇರವಾಗಿ ಹರಿಯುತ್ತಿರುವ ಕಲಹಿತ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಲಿದೆ.

-ಕೃಷ್ಣಪ್ರಸಾದ್‌, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ.