ಜಿಲ್ಲಾಸ್ಪತ್ರೆ ರಸ್ತೆಯ ಮೇಲೆ ಚರಂಡಿ ನೀರು ಸಂಗ್ರಹ

| Published : Jun 21 2024, 01:07 AM IST

ಸಾರಾಂಶ

ನಗರ ಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಚೇಂಬರ್‌ಗೆ ಸಕ್ಕೀಂಗ್ ಮಿಷನ್ ಹಾಕಿ ನೀರು ಹರಿಯಿತೆಂದು ಕೈ ತೊಳೆದುಕೊಂಡರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ಎಂಟನೇ ವಾರ್ಡ್‌ನ ಜಿಲ್ಲಾಸ್ಪತ್ರೆಗೆ ತೆರಳುವ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ ಉಕ್ಕಿ ಹರಿಯುತ್ತಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ.ಇದರಿಂದ ಜಿಲ್ಲಾಸ್ಪತ್ರೆಗೆ ತೆರಳಲು ರೋಗಿಗಳ ಪರದಾಟ ಪಡುತ್ತಿದ್ದಾರೆ ಹಾಗೂ ಸುತ್ತಮುತ್ತ ವಾಸಿಸುವ ಜನರು ಕಲುಷಿತ ನೀರಿನ ದುರ್ವಾಸನೆಯಿಂದ ಬೇಸತ್ತಿದ್ದು, ಅಂಗಡಿ ಮಳಿಗೆಗಳಲ್ಲಿ ಮತ್ತು ಮನೆಗಳಲ್ಲಿ ಇರಲಾಗದ ಪರಿಸ್ಥಿತಿ ಉಂಟಾಗಿದೆ.

ಮನವಿ ಸಲ್ಲಿಸಿದರೂ ಕ್ರಮ ಇಲ್ಲ

ಈ ಬಗ್ಗೆ ಕೆಲವು ದಿನದ ಹಿಂದೆ ಈ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಚೇಂಬರ್‌ಗೆ ಸಕ್ಕೀಂಗ್ ಮಿಷನ್ ಹಾಕಿ ನೀರು ಹರಿಯಿತೆಂದು ಕೈ ತೊಳೆದುಕೊಂಡರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದರ ದುರ್ವಾಸನೆ ತಾಳಲು ಆಗದು ಎಂದು ಸ್ಥಳೀಯ ನಿವಾಸಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳು ಆರೋಪಿಸಿದ್ದಾರೆ.

ಪ್ರಸ್ತುತ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ವೇಳೆ ಚರಂಡಿಗಳ ಬದಲಿಗೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ದೊಡ್ಡ ದೊಡ್ಡ ಚರಂಡಿಗಳು ನಿಂತುಕೊಂಡಿರುವ ಕೊಳಚೆ ನೀರಿನಿಂದ ತುಂಬಿವೆ.

ಕಾಮಗಾರಿಗಳು ಅಪೂರ್ಣ

ಜಿಲ್ಲಾ ಕೇಂದ್ರವು 31 ವಾರ್ಡುಗಳನ್ನು ಹೊಂದಿದೆ. ಇಲ್ಲಿನ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಅವಾಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಧಿಕಾರಿಗಳು ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಚರಂಡಿಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸಿಲ್ಲ. ಎರಡೂರು ತುಂಡಾದ ಚೈನ್‌ ಮಾದರಿಯಲ್ಲಿ ಇದೆ. ಹೀಗಿರುವಾಗ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿಯೇ ನಿಂತು ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿದೆ.

ಜಿಲ್ಲಾಕೇಂದ್ರ ಅಭಿವೃದ್ಧಿ ಹೊಂದುತ್ತಿರುವುದರ ನಡುವೆ ಹಲವು ವರ್ಷಗಳಿಂದ ಬಾಧಿಸುತ್ತಿರುವ ಯುಜಿಡಿ ಕಿರಿಕಿರಿ ಮಾತ್ರ ತಪ್ಪಿಲ್ಲ. ನಗರದ ಬಹುತೇಕ ಕಡೆ ಯುಜಿಡಿ ಬ್ಲಾಕ್ ಆಗಿರುತ್ತದೆ. ದಿನಗಟ್ಟಲೇ ನೀರು ಹರಿದು ಹೋಗುತ್ತಿರುತ್ತದೆ. ಪದೇ ಪದೆ ಒಳಚರಂಡಿಯಲ್ಲಿ ನೀರು ನಿಲ್ಲುತ್ತಿದ್ದರೂ ತಾತ್ಕಾಲಿಕ ಪರಿಹಾರ ಕೈಗೊಳ್ಳಲಾಗುತ್ತಿದೆ. ಆಗಾಗ ಸಕ್ಕಿಂಗ್ ಯಂತ್ರವನ್ನು ತಂದು ನೀರು ಖಾಲಿ ಮಾಡಲಾಗುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಸಮಸ್ಯೆ ಪುನಃ ಕಂಡು ಬರುತ್ತದೆ. ಅಧಿಕಾರಿಗಳ ನಿರ್ಲಕ್ಷದ ಫಲ

ಇದಕ್ಕೆ ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಮತ್ತು ಕಳಪೆ ಕಾಮಗಾರಿ, ಪೈಪು ಒಡೆದಿರುವುದು ಸೇರಿ ನಾನಾ ಕಾರಣಗಳಿವೆ. ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇದೀಗ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಮತ್ತೊಂದೆಡೆ ಕೋಟ್ಯಂತರ ರು.ಗಳ ಅನುದಾನವನ್ನು ನುಂಗಿರುವ ಯುಜಿಡಿಗೆ ವಾಡಿರ್ನಲ್ಲಿನ ಚರಂಡಿಗಳ ಸಂಪರ್ಕ ಕಲ್ಪಿಸಿರುವುದು ಅವೈಜ್ಞಾನಿಕ ಯೋಜನೆಗೆ ನಿಖರ ನಿದರ್ಶನ. ಮಲ ಮೂತ್ರ, ಶೌಚಗೃಹ ನೀರು ಚರಂಡಿಯ ನೀರಿನಲ್ಲಿ ಮಿಶ್ರಣಗೊಳ್ಳುತ್ತಿವೆ. ಮಳೆಯ ನೀರು ಮಿಶ್ರಣವಾಗಿ, ಮಳೆ ಕೊಯ್ಲು ಎಂಬುದಕ್ಕೆ ಅರ್ಥವಿಲ್ಲದಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.ರೋಗಿಗಳ ಪರದಾಟ:

ಕಾಯಿಲೆ ವಾಸಿ ಮಾಡಿ ಕೋಳ್ಳಲು ಆಸ್ಪತ್ರೆಗೆ ಬರುತ್ತೇವೆ. ಆದರೆ ಆಸ್ಪತ್ರೆಗೆ ಬರುವ ದಾರಿಯಲ್ಲಿ ಯುಜಿಡಿಯ ಕೊಳಚೆ ನೀರಿನಲ್ಲಿ ಬಂದು ಕಾಯಿಲೆ ವಾಸಿ ಮಾಡಿಕೊಂಡು ಮತ್ತೆ ಮನೆಗೆ ಹೋಗುವಾಗ ಅದೇ ಯುಜಿಡಿಯ ಕೊಳಚೆ ನೀರಿನಲ್ಲಿ ವಾಪಸ್‌ ಹೋಗುವಾಗ ಮತ್ತೆ ಕಾಯಿಲೆಗಳನ್ನು ಹೊತ್ತು ಮನೆ ಸೇರದೆ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ ಎಂದು ಆಸ್ಪತ್ರೆಗೆ ಬಂದಿರುವ ರೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈಗಲಾದರೂ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಯುಜಿಡಿಯ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಮುಕ್ತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.