ಸಾರಾಂಶ
ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಯ ಬಹುತೇಕ ಭಾಗಗಳಿಗೆ ಕುಡಿಯುವ ನೀರು, ಕೃಷಿಗೆ ಆಧಾರವಾದ ದಕ್ಷಿಣ ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿಯ ಸೂಳೆಕೆರೆ ಒಡಲು ಈಗ ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ಬರಿದಾಗುತ್ತಿದೆ!
ಭೀಕರ ಬರದಿಂದಾಗಿ ತತ್ತರಿಸಿರುವ ರಾಜ್ಯದಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ತಕ್ಕಮಟ್ಟಿಗೆ ಆಸರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ದಿನದಿನಕ್ಕೂ ಹರಡುತ್ತಿರುವ ಅಕ್ರಮ ಪಂಪ್‌ಸೆಟ್‌ಗಳು ಕೆರೆಯನ್ನೇ ಬರಿದು ಮಾಡುತ್ತಿವೆ. ತೋಟಕ್ಕೆ ನೀರು ಹಾಯಿಸಲು ಕೆರೆಯಿಂದ ಹಲವು ಕಿಮೀ ದೂರದವರೆಗೆ ಅಕ್ರಮವಾಗಿ ಪೈಪ್ ಲೈನ್ ಹಾಕಿದ್ದರೂ ನೀರಾವರಿ ಇಲಾಖೆ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಂತಿದೆ.ಕುಡಿಯುವ ನೀರು, ಕೃಷಿಗೆ ಆಧಾರವಾದ ಸೂಳೆಕೆರೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಅಳವಡಿಸಲಾಗಿದೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿಯಲ್ಲಿರುವ ಚನ್ನಗಿರಿ ತಾಲೂಕಿನಲ್ಲಿ ರೈತರು ತಮ್ಮ ಅಡಿಕೆ ಇತರೆ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸೂಳೆಕೆರೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಂದಾಗಿ ಹತ್ತಾರು ಅಡಿ ಇದ್ದ ನೀರಿನ ಮಟ್ಟ ಈಗ ಕೇವಲ ಏಳೆಂಟು ಅಡಿಗೆ ತಲುಪಿದೆ. ಕಳೆದ ಕೆಲ ದಶಕದಿಂದ ಸೂಳೆಕೆರೆ ತುಂಬಿದಾಗ ಮುಳುಗಡೆಯಾಗುತ್ತಿದ್ದ ಸಿದ್ದನಾಲ, ಬಸವ ನಾಲಾ ತೂಬುಗಳಿರುವ ಕಡೆಗಳಲ್ಲಿದ್ದ ನೀರಿನ ಮಟ್ಟ ತೋರಿಸುವ ಕುದುರೆ ತೂಬು ದರ್ಶನವಾಗುತ್ತಿದೆ. ಕುದುರೆ ತೂಬು ಕಾಣಿಸಿಕೊಂಡಾಗಲೆಲ್ಲಾ ಬರ ನಿಶ್ಚಿತ, ನೀರಿನ ಸಂಕಷ್ಟ ಪಡಬೇಕಾದ ಪರಿಸ್ಥಿತಿ ಬಂದೊದಗಲಿದೆ ಎನ್ನುತ್ತಾರೆ ಸ್ಥಳೀಯ ರೈತರು.
ನಿತ್ಯವೂ ಸೂಳೆಕೆರೆಯಿಂದ ಆರೇಳು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ನೀರನ್ನು ಪಂಪ್‌ಸೆಟ್ ಮೂಲಕ ತೋಟಗಳಿಗೆ ಹರಿಸಲಾಗುತ್ತಿದೆ. ಬರ ಆವರಿಸಿದ್ದರೂ ಇರುವ ನೀರನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ನೀರಾವರಿ ಇಲಾಖೆ, ಜಿಲ್ಲಾಡಳಿತವಾಗಲೀ ಗಂಭೀರವಾಗಿ ಆಲೋಚಿಸುತ್ತಿಲ್ಲ. ಮತ್ತೊಂದು ಕಡೆ ಕಷ್ಟಪಟ್ಟು ಬೆಳೆಸಿದ ಅಡಿಕೆ ಇತರೆ ತೋಟ ಉಳಿಸಿಕೊಳ್ಳಲು ರೈತರು ಸಾಲ ಮಾಡಿ, ಕಿಮೀಗಟ್ಟಲೇ ತಮ್ಮ ತೋಟಗಳಿಗೆ ನೀರನ್ನು ಒಯ್ಯುತ್ತಿದ್ದಾರೆಂಬುದು ಸಾಕ್ಷೀಕರಿಸುವಂತೆ ಕೆರೆ ಅಂಗಳದ ಅಕ್ರಮ ಪಂಪ್‌ಸೆಟ್‌ಗಳೇ ಕಥೆ ಹೇಳುತ್ತಿವೆ.ಕುಡಿಯುವ ನೀರಿಗೆ ಹಾಹಾಕಾರ:
ಸದ್ಯಕ್ಕೆ ಸೂಳೆಕೆರೆಯಲ್ಲಿ ಸಂಗ್ರಹವಿರುವ ನೀರನ್ನು ನೋಡಿದರೆ ಇನ್ನು 15-20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಕೆರೆಯಲ್ಲಿದೆ. ಅತ್ತ ಭದ್ರಾ ಡ್ಯಾಂ, ನದಿಯಿಂದ ಸೂಳೆಕೆರೆಗೆ ಬರುತ್ತಿದ್ದ ನೀರು ಬಂದ್ ಆಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ತಿಂಗಳಲ್ಲೇ ಜಿಲ್ಲೆಯ ಚನ್ನಗಿರಿ ಭಾಗ, ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಆಡಳಿತ ಯಂತ್ರ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೂಳೆಕೆರೆ ನೀರನ್ನು ಸಂರಕ್ಷಿಸಲು ಮುಂದಾಗಿದೆ. ಭದ್ರಾ ನಾಲೆ ನೀರಿನ ಮಟ್ಟ ಕಾಯಲು 3 ತಂಡಭದ್ರಾ ನಾಲೆಯಲ್ಲಿ ಅಕ್ರಮ ಪಂಪ್ ಸೆಟ್ ಹಾವಳಿ ತಡೆಯಲು ಕಂದಾಯ, ನೀರಾವರಿ, ಪೊಲೀಸ್ ಇಲಾಖೆ, ಬೆಸ್ಕಾಂ ಒಳಗೊಂಡ 3 ತಂಡ ರಚಿಸಲಾಗಿದೆ. ನಾಲೆಗೆ ಹೊಂದಿಕೊಂಡಿರುವ ಅಕ್ರಮ ಪಂಪ್ ಸೆಟ್ ತೆರವಿಗೆ ಸೂಚನೆ ನೀಡಿದೆ, ತೆರವುಗೊಳಿಸದಿದ್ದರೆ ನಾಲೆಯುದ್ದಕ್ಕೂ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೆ ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲದೇ, ಬೆಸ್ಕಾಂನಿಂದ ಅಕ್ರಮ ಪಂಪ್ ಸೆಟ್ ಅಳವಡಿಸಿರುವ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೂ ಸೂಚನೆ ನೀಡಿದೆ.