ಬಳ್ಳಾರಿ: ರಂಗಭೂಮಿ ಕೇವಲ ಮನರಂಜನೆಯ ಸಾಧನಗಳಲ್ಲ. ಅವು ಸಮಾಜದ ಜಾಗೃತಿ, ಸಂಸ್ಕೃತಿ ಸಂರಕ್ಷಣೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡುವಂಥವು ಎಂದು ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಕಪ್ಪಗಲ್ಲು ನಾಟಕೋತ್ಸವದ ಎರಡನೇ ದಿನದ ನಾಟಕಕ್ಕೆ ಚಾಲನೆ ಹಾಗೂ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ನಾಟಕ, ಕಲೆ, ಸಾಹಿತ್ಯ ಚಟುವಟಿಕೆಗಳು ಸಮಾಜದ ಜೀವನಾಡಿಯಾಗಿದೆ. ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸೃಜನಶೀಲ ಮಾಧ್ಯಮವಾಗಿವೆ. ಕಲೆ, ಸಾಹಿತ್ಯ, ರಂಗಭೂಮಿ ಚಟುವಟಿಕೆಗಳಿಂದ ಸಾಮಾಜಿಕ ಜಾಗೃತಿ ಮೂಡುತ್ತದೆ. ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಯ ಜೊತೆಗೆ ನಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ. ನೈತಿಕ ಮೌಲ್ಯಗಳನ್ನು ಬಿತ್ತಲು ರಂಗಭೂಮಿ ಚಟುವಟಿಕೆಗಳು ಹೆಚ್ಚು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಸೃಜನಶೀಲತೆಯೂ ಹೆಚ್ಚುತ್ತದೆ. ಉತ್ತಮ ನಾಟಕಗಳ ವೀಕ್ಷಣೆಯಿಂದ ಕಲ್ಪನಾಶಕ್ತಿ, ಚಿಂತನಾ ಸಾಮರ್ಥ್ಯ ವೃದ್ಧಿಸುತ್ತದೆ. ಪರಸ್ಪರ ಸಹಬಾಳ್ವೆಯ ಮನೋಭಾವ ಬೆಳೆಯುತ್ತದೆ. ಉತ್ತಮ ವಿಚಾರ ಮತ್ತು ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗುತ್ತದೆ ಎಂದು ಹೇಳಿದರು.
ಬದುಕೆಂಬ ಪರೀಕ್ಷೆಯಲ್ಲಿ ಪಾಸ್ ಆಗುವುದು ಮುಖ್ಯ:ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಪದವಿ ಪಡೆಯುವಂತಾಗಲಿ. ಆದರೆ, ಫೇಲ್ ಆದ ವಿದ್ಯಾರ್ಥಿಗಳು ಕೊರಗುವುದು ಬೇಡ. ಪರೀಕ್ಷೆಯಲ್ಲಿ ಫೇಲಾಗುವುದು ಅಂತಿಮವಲ್ಲ. ಬದುಕಿನಲ್ಲಿ ಪಾಸ್ ಆಗುವುದು ದೊಡ್ಡ ಸಂಗತಿ. ಸೋಲು ಹೊಸದೊಂದು ಕಲಿಯುವ ಅನುಭವ ಎಂದೇ ಭಾವಿಸಬೇಕು. ಅಂಕಗಳು ಮಾತ್ರ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಸೋಲುಗಳು ಮತ್ತಷ್ಟು ಗಟ್ಟಿಯನ್ನಾಗಿಸುತ್ತವೆ. ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ರೂಪಿಸುತ್ತವೆ. ತಪ್ಪುಗಳಿಂದ ಕಲಿತು ಮತ್ತೆ ಪುಟಿದೇಳಬೇಕು ಎಂದು ಸಲಹೆ ನೀಡಿದರು.
ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಪುರುಷೋತ್ತಮ ರೆಡ್ಡಿ ದಮ್ಮೂರು, ಆಹಾರ ಮತ್ತು ಸರಬರಾಜು ಇಲಾಖೆಯ ಬಿ.ಕಟ್ಟೆಗೌಡ, ನಿವೃತ್ತ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕೆ.ಎಸ್. ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ದೊಡ್ಡ ರಾಮಾಂಜಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಆಚಾರ್ ಕಪ್ಪಗಲ್ಲು, ಮೆಹತಾಬ್ ಕಾರ್ಯಕ್ರಮ ನಿರ್ವಹಿಸಿದರು.
ಕೊನೆಯಲ್ಲಿ ಜೇವರ್ಗಿ ರಾಜಣ್ಣ ಅವರ ರಚನೆ-ನಿರ್ದೇಶನದ "ಕುಂಟಕೋಣ ಮೂಕ ಜಾಣ " ನಾಟಕ
ಪ್ರದರ್ಶನಗೊಂಡಿತು. ಕಪ್ಪಗಲ್ಲು, ಸಿರಿವಾರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ನಾಟಕ ವೀಕ್ಷಿಸಿದರು.