ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮಾರ್ಚ್ 21ರಿಂದ 27ರ ವರೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6ಕ್ಕೆ ನಾಟಕೋತ್ಸವ, ತತ್ವಪದಕಾರರ ಗಾಯನ, ರಂಗ ಕಲಾವಿದ ಶ್ರೀನಿವಾಸ ಜಿ. ಕಪ್ಪಣ್ಣಗೆ ಗೌರವ ಸನ್ಮಾನ ಹಾಗೂ ನಾಡೋಜ ಬಸವಲಿಂಗ ಪಟ್ಟದ್ದೇವರಿಗೆ ಅಭಿನಂದನಾ ಸಮಾರಂಭ ಹಾಗೂ ಸೋನಾರೆ ಎಕ್ಸ್‌ಪ್ರೆಸ್ ದಿನಪತ್ರಿಕೆ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮವನ್ನು ಜಾನಪದ ಕಲಾವಿದರ ಬಳಗ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದ ಅವರು, ಪ್ರತಿದಿನ ಸಾಮಾಜಿಕ ಸಂದೇಶ ಸಾರುವ ನಾಟಕಗಳು, ಮತ್ತು ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಕಲಾವಿದರಿಂದ ಕಲಾಪ್ರದರ್ಶನ ಜರುಗಲಿದೆ ಎಂದರು.
ಮಾ.21ರಂದು ಗೋವಾ ಅಕಾಡೆಮಿಯ ಮಾಜಿ ನಿರ್ದೇಶಕಿ ಪದ್ಮಶ್ರೀ ಜೋಸಲ್ಕರ್ ನಾಟಕೋತ್ಸವ ಉದ್ಘಾಟಿಸುವರು. ಅಂದು ಸಿಂಧನೂರಿನ ಕಲಾವಿದ ನಾರಾಯಣಪ್ಪ ಮಾಡಶಿರವಾರ ತತ್ವಪದ ಗಾಯನ ಮಾಡುವರು. ಜಯಂತ್ ಕಾಯ್ಕಿಣಿ ರಚನೆ ಮಾಡಿರುವ ‘ಜತೆಗಿರುವನು ಚಂದಿರ’ ಎನ್ನುವ ನಾಟಕ ಪ್ರದರ್ಶನ ನಡೆಯಲಿದೆ.ಮಾ.22ರಂದು ಸಿದ್ಧಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಡಾ. ಗುರಮ್ಮಾ ಸಿದ್ದಾರೆಡ್ಡಿ ಉದ್ಘಾಟಿಸುವರು. ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸುವರು. ಕೆ.ಎನ್ ಸಾಳುಂಕೆ ರಚಿಸಿರುವ ತಾಳಿಯ ತಕರಾರು ನಾಟಕ ಜರುಗಲಿದೆ. ಮಾ.23ರಂದು ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲ್ಲಿಕಜಾನ್ ಶೇಖ್ ಉದ್ಘಾಟನೆ ಮಾಡುವರು. ಅಂದು ಡಾ. ನಟರಾಜ ಬೂದಾಳು ರಚಿಸಿದ ಕಲ್ಯಾಣದ ಬಾಗಿಲು ನಾಟಕ ಪ್ರದರ್ಶನ ನಡೆಯಲಿದೆ.
ಮಾ.24ರಂದು ನಡೆಯುವ ನಾಟಕೋತ್ಸವವನ್ನು ಹೈದ್ರಾಬಾದ್‌ನ ಉದ್ಯಮಿ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಕಾಲ್ವಾ ಉದ್ಘಾಟಿಸುವರು, ಹಬೀಬ್ ತನ್ವೀರ್ ರಚನೆ ಹಾಗೂ ಮಂಡ್ಯ ರಮೇಶ ನಿರ್ದೇಶನದ ಚೋರ ಚರಣದಾಸ ನಾಟಕ ಪ್ರದರ್ಶನವಾಗಲಿದೆ. ಮಾ.25ರಂದು ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್ ನಾಟಕೋತ್ಸವ ಉದ್ಘಾಟಿಸುವರು. ಅಂದು ಅಡುಗೆ ಮನೆಯಲ್ಲೊಂದು ಹುಲಿ ನಾಟಕ ಪ್ರದರ್ಶನ ನಡೆಯಲಿದೆ. ಮಾ.26ರಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅವಿನಾಶ ಎಂ.ಎ. ಉದ್ಘಾಟಿಸುವರು. ಅಂದು ಬೆತ್ತಲೆ ಅರಸನ ರಾಜರಹಸ್ಯ ನಾಟಕ ಪ್ರದರ್ಶನವಾಗಲಿದೆ.ಮಾ.27ರಂದು ಪುಕ್ಸಟ್ಟೆ ಪ್ರಸಂಗ ನಾಟಕ ಜರುಗಲಿದೆ. ಈ ಎಲ್ಲಾ ನಾಟಕಗಳು ಪ್ರತಿದಿನ ಸಂಜೆ 6 ಗಂಟೆಗೆ ಜರುಗಲಿವೆ. ಪ್ರತಿದಿನ ಸಂಜೆ ನಡೆಯುವ ಈ ನಾಟಕೋತ್ಸವಕ್ಕೆ ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು, ಉದ್ಯಮಿಗಳು, ಸಮಾಜ ಸೇವಕರು, ಕಲಾವಿದರು, ಸಾಹಿತಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಪ್ರವೇಶ ಉಚಿತವಾಗಿದೆ. ಇದೇ ವೇಳೆ ಏಳು ಜನ ಹಿರಿಯ ಕಲಾವಿದರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. ಸುದ್ಧಿಗೋಷ್ಟಿಯಲ್ಲಿ ಕಲಾವಿದ ಸುನೀಲ ಕಡ್ಡೆ ಉಪಸ್ಥಿತರಿದ್ದರು.