ಅರಬೈಲ್ ಘಟ್ಟದಲ್ಲಿ ಕಾರು ಸುಟ್ಟು, ವ್ಯಕ್ತಿ ಸಾವು ಪ್ರಕರಣದಲ್ಲಿ ಮೂವರ ಬಂಧನ; ದೀಪನ್ ಎಂ.ಎನ್
ಕನ್ನಡಪ್ರಭ ವಾರ್ತೆ ಕಾರವಾರಯಲ್ಲಾಪುರ ತಾಲೂಕಿನ ಅರಬೈಲು ಘಟ್ಟದಲ್ಲಿ ಕಾರೊಂದು ಪ್ರಪಾತಕ್ಕೆ ಉರುಳಿ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದರು ಎನ್ನಲಾದ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಇದು ಸಹಜ ಅಪಘಾತವಲ್ಲ, ಬದಲಾಗಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಹೆಣೆದಿದ್ದ ಭೀಕರ ಸಂಚು ಎಂಬುದನ್ನು ಭೇದಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ ಎಂದು ಎಸ್ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ವಿವರ ನೀಡಿದ ಅವರು, ಕಳೆದ ಏ. 8, 2026ರಂದು ಮುಂಜಾನೆ 5ರಿಂದ 7ರ ಸುಮಾರಿಗೆ ಯಲ್ಲಾಪುರದ ಅರಬೈಲು ಘಟ್ಟದ ತಾಳೆ ಕುಂಬ್ರಿ ಬಸ್ ನಿಲ್ದಾಣದ ಎದುರು ಕಾರೊಂದು (KA-04/MJ-8986) ಅತಿವೇಗವಾಗಿ ಬಂದು ರಸ್ತೆಯ ತಗ್ಗಿಗೆ ಉರುಳಿ ಬೆಂಕಿ ಹೊತ್ತಿಕೊಂಡಂತೆ ಕಂಡುಬಂದಿತ್ತು. ಕಾರಿನೊಳಗಿದ್ದ ವ್ಯಕ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದ. ಆರಂಭದಲ್ಲಿ ಇದೊಂದು ಆಕಸ್ಮಿಕ ಅಪಘಾತ ಎಂದು ಭಾವಿಸಿ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದರು.ಆದರೆ, ಕಾರಿನ ನಂಬರ್ ಆಧರಿಸಿ ತನಿಖೆ ನಡೆಸಿದಾಗ ಅದು ಬೆಂಗಳೂರು ಮೂಲದ ವಾಹನವೆಂದು ತಿಳಿದುಬಂದಿದೆ. ಮಾಲೀಕರನ್ನು ಸಂಪರ್ಕಿಸಿದಾಗ, ಆ ಕಾರನ್ನು ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲನಿಯ ನಿವಾಸಿ ನಿತೇಶ್ ಜಗನ್ನಾಥ ಧಾಪಳೆ (35) ಎಂಬಾತ ತೆಗೆದುಕೊಂಡು ಹೋಗಿದ್ದ ಎಂಬ ಮಾಹಿತಿ ಲಭ್ಯವಾಯಿತು. ವಿಷಯ ತಿಳಿದು ಬಂದ ನಿತೇಶ್ ತಂದೆ, ಇದೊಂದು ಸಹಜ ಅಪಘಾತವಲ್ಲ, ದುಷ್ಕರ್ಮಿಗಳು ನನ್ನ ಮಗನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಈ ರೀತಿ ಸುಳ್ಳು ಅಪಘಾತ ಸೃಷ್ಟಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.ತಂದೆಯ ದೂರಿನ ಮೇರೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಯಿತು. ಪ್ರಕರಣವನ್ನು ಕೊಲೆ ಸೆಕ್ಷನ್ 103 ಹಾಗೂ ಸಾಕ್ಷ್ಯ ನಾಶ ಸೆಕ್ಷನ್ 238 ಅಡಿಯಲ್ಲಿ ಬದಲಾಯಿಸಿ ತನಿಖೆ ಚುರುಕುಗೊಳಿಸಲಾಯಿತು. ಖಚಿತ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಂದು ಮುಂಜಾನೆ 5 ರಿಂದ 5.30ರ ಅವಧಿಯಲ್ಲಿ ಕೆಂಪು ಬಣ್ಣದ ಕಾರೊಂದು ಹಾಗೂ ಅದರಲ್ಲಿ ನಾಲ್ವರು ವ್ಯಕ್ತಿಗಳು ಘಟನಾ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ದೃಶ್ಯ ಸೆರೆಯಾಗಿತ್ತು. ಆ ವಾಹನದ ಜಾಡು ಹಿಡಿದು ಹೋದಾಗ ಇಡೀ ಕೊಲೆ ಪ್ರಕರಣ ಬಯಲಾಗಿದೆ.ಹುಬ್ಬಳ್ಳಿಯ ತಾರಿಹಾಳದಲ್ಲಿ ನಿತೇಶ್ ಧಾಪಳೆ ಎಂಬಾತನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು, ಬಳಿಕ ಶವವನ್ನು ಆತನದೇ ಕಾರಿನಲ್ಲಿ ಯಲ್ಲಾಪುರದ ಅರಬೈಲು ಘಟ್ಟಕ್ಕೆ ತಂದು, ಪ್ರಪಾತಕ್ಕೆ ತಳ್ಳಿ ಬೆಂಕಿ ಹಚ್ಚಿ ಅಪಘಾತದಂತೆ ಬಿಂಬಿಸಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿಯ ಹೆಗ್ಗೇರಿ ಮೂಲದ ಅಬ್ದುಲ್ ನಹೀಮ್ ಬಸೀರ್ ಅಹ್ಮದ್ ಮುಜಾವರ್, ದಿವಡಗಿ ಓಣಿಯ ಮೌಲಾಸಾಬ್ ಬಾಬಾಜಾನ್ ಬಾಡ ಹಾಗೂ ಗಾರ್ಡನ್ ಪೇಟೆಯ ದಾದಾಪೀರ್ ಅಲಿಯಾಸ್ ಅಪ್ತಾಬ್ ಮೆಹಬೂಬ್‌ಸಾಬ್ ಬಾಳಸಂಗಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ವರು ಆರೋಪಿಗಳಿಗಾಗಿ ಬಲೆ ಬೀಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್ಪಿ ದೀಪನ್ ವಿವರಿಸಿದರು.ಈ ಯಶಸ್ವಿ ಕಾರ್ಯಾಚರಣೆಯನ್ನು ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಸಿಪಿಐ ರಮೇಶ್ ಹನಾಪೂರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಇತರ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಎಂ.ಎನ್. ದೀಪನ್ ಶ್ಲಾಘಿಸಿದ್ದಾರೆ.