20ರಿಂದ ಗದಗದಲ್ಲಿ ನಾಟಕ ಪ್ರದರ್ಶನ ಆರಂಭ

| Published : Jun 19 2024, 01:01 AM IST

ಸಾರಾಂಶ

ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಜೂ. 20ರಿಂದ ಗದಗ ನಗರದಲ್ಲಿ ಗಂಗಿ ಮನ್ಯಾಗ, ಗೌರಿ ಹೊಲದಾಗ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಕವಿ ಹಾಗೂ ನಾಟಕ ಬರಹಗಾರ ರಾಜಣ್ಣ ಜೇವರ್ಗಿ ಹೇಳಿದರು.

ಗದಗ: ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಜೂ. 20ರಿಂದ ಗದಗ ನಗರದಲ್ಲಿ ಗಂಗಿ ಮನ್ಯಾಗ, ಗೌರಿ ಹೊಲದಾಗ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಕವಿ ಹಾಗೂ ನಾಟಕ ಬರಹಗಾರ ರಾಜಣ್ಣ ಜೇವರ್ಗಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ರಂಗಭೂಮಿ ಬಹಳ ತೊಂದರೆ ಅನುಭವಿಸುತ್ತಿದೆ. ಟಿವಿ, ಮೊಬೈಲ್ ಹಾವಳಿಯಿಂದ ಬಹಳ ಹೊಡೆತ ಬಿದ್ದಿದೆ. ಆದರೂ ನಾಟಕಗಳ ಪರಂಪರೆ 180 ವರ್ಷಗಳಿಂದ ಇದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ನಾಟಕಗಳು ನಡೆದುಕೊಂಡು ಹೋಗುತ್ತಿವೆ ಎಂದು ಹೇಳಿದರು.

ಕರ್ನಾಟಕದಲ್ಲಿ 24 ವೃತ್ತಿ ಕಂಪನಿಗಳಿವೆ. ಅದರಲ್ಲಿ 8-10 ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದ್ದು, ಇನ್ನುಳಿದ ಕಂಪನಿಗಳು ಅರೆಕಾಲಿಕವಾಗಿ ನಡೆದುಕೊಂಡು ಹೋಗುತ್ತಿವೆ. ಸರ್ಕಾರ ನೀಡುವ ಅನುದಾನದಿಂದ ನಾಟಕ ಕಂಪನಿಗಳು ಇನ್ನೂ ಜೀವಂತ ಇವೆ. ಅನುದಾನ ಇಲ್ಲದಿದ್ದರೆ ಬೆರಳೆಣಿಕೆಯಷ್ಟು ನಾಟಕ ಕಂಪನಿಗಳು ಉಳಿಯುತ್ತಿದ್ದವು. ಯುವಕರು ಕಲೆಯ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಇದೊಂದು ನಾಟಕ ರಂಗಕ್ಕೆ ದೊಡ್ಡ ಹಿನ್ನಡೆಯಾಗಿದೆ. ವೃತ್ತಿ ರಂಗಾಯಣವನ್ನು ನಾವು ಕೇಳುತ್ತಿದ್ದೇವೆ. ಮೈಸೂರಿನಲ್ಲಿ ರಂಗಾಯಾಣ ಇದೆ. ಇದರಿಂದ ಪ್ರತಿ ವರ್ಷ 20 ಕಲಾವಿದರು ಹೊರಬರುತ್ತಿದ್ದಾರೆ. ದಾವಣಗೆರೆಯಲ್ಲಿ ರಂಗಾಯಣ ಇದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗದಗ ನಗರದಲ್ಲಿ ಮೊದಲು ಮೂರು ನಾಟಕ ಕಂಪನಿಗಳು ಏಕಕಾಲಕ್ಕೆ ನಡೆಯುತ್ತಿದ್ದವು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಪುಟ್ಟರಾಜ ಕಲಾ ಪೋಷಕ ಸಂಘ ಕಲೆಯನ್ನು ಬೆಳೆಸಿ ಉಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ನಗರಕ್ಕೆ ಯಾವುದೇ ನಾಟಕ ಕಂಪನಿ ಬಂದರೂ ಅವರಿಗೆ ತನು-ಮನ-ಧನದಿಂದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದಾರೆ ಎಂದು ಸ್ಮರಿಸಿದರು.

ಜೇವರ್ಗಿ ಕುಟುಂಬದವರೆಲ್ಲರೂ ಕಲಾವಿದರಾಗಿದ್ದಾರೆ. ಎಲ್ಲರೂ ನಾಟಕ ವೀಕ್ಷಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಪುಟ್ಟರಾಜ ಕಲಾ ಪೋಷಕ ಸಂಘದ ಅಧ್ಯಕ್ಷ ಎಫ್‌.ವಿ. ಮರಿಗೌಡ್ರ ಹೇಳಿದರು.

ನಾಟಕ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ವಹಿಸಿಕೊಳ್ಳಲಿದ್ದಾರೆ. ಎಚ್.ಎಸ್. ಪಟ್ಟಣಶೆಟ್ರು, ಬಿ.ಬಿ. ಅಸೂಟಿ, ಶಾಂತಣ್ಣ ಮುಳವಾಡ, ನಜೀರ್ ಮಜ್ಜಿಗಿ, ಎಂ. ಎಂ. ಹಿರೇಮಠ, ಫೀರಸಾಬ್ ಕೌತಾಳ, ಡಾ. ಹನುಮಂತಗೌಡ ಕಲ್ಮನಿ, ಪ್ರಕಾಶ ಕರಿ,

ವಿ.ಕೆ. ಗುರುಮಠ, ಎಸ್.ವಿ. ಅಕ್ಕಿ, ಆನಂದ ಬಿಂಗಿ, ರಾಮಕೃಷ್ಣ ಪಾಂಡ್ರೆ, ನಾಗರಾಜ್ ಅನೇಕರು ಹಾಜರಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಗಮೇಶ್ ಬಿಳಗಿ, ಬಸವರಾಜ ಕರಮುಡಿ, ಪ್ರಭಯ್ಯ ಹಿರೇಮಠ, ಸಿದ್ದಣ್ಣ, ಅಂಬರೇಶ್ ನಾಗೂರ ಉಪಸ್ಥಿತರಿದ್ದರು.