ರಂಗಭೂಮಿ ವೇಷಭೂಷಣಗಳ ಪ್ರದರ್ಶನವಲ್ಲ. ಬೆಳಕು-ನೆರಳಿನ ಆಟವಲ್ಲ, ಸಮಾಜದಲ್ಲಿನ ಸತ್ಯ, ನ್ಯಾಯ, ಅನ್ಯಾಯದ ಮೇಲೆ ಬೆಳಕು ಚೆಲ್ಲುವ ದೊಡ್ಡ ಶಕ್ತಿಯಾಗಿದೆ.

ಹುಬ್ಬಳ್ಳಿ:

ನಾಟಕಗಳು ಜೀವನಕ್ಕೆ ಶಕ್ತಿ, ಪ್ರೋತ್ಸಾಹ ನೀಡುತ್ತವೆ. ಇಂದಿನ ಪೀಳಿಗೆ ಸಿನಿಮಾ ಹಿಂದೆ ಬಿದ್ದು, ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳಿಂದ ದೂರ ಆಗಿದ್ದಾರೆ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ತಿಳಿಸಿದರು.

ನಗರದ ಜೆಸಿ ನಗರದ ನೌಕರರ ಭವನದಲ್ಲಿ ವಿಶ್ವರಂಗಭೂಮಿ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವರ್ಣ ರಂಗಭೂಮಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹರಿಶ್ಚಂದ್ರ ನಾಟಕ ಮಹಾತ್ಮ ಗಾಂಧಿಗೆ ಸ್ಫೂರ್ತಿಯಾಗಿತ್ತು. ಹೀಗಾಗಿ ನಾಟಕಗಳು ಮನ ವಿಕಾಸ ಮಾಡುತ್ತವೆ ಎಂದರು.ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ರಂಗಭೂಮಿ ವೇಷಭೂಷಣಗಳ ಪ್ರದರ್ಶನವಲ್ಲ. ಬೆಳಕು-ನೆರಳಿನ ಆಟವಲ್ಲ, ಸಮಾಜದಲ್ಲಿನ ಸತ್ಯ, ನ್ಯಾಯ, ಅನ್ಯಾಯದ ಮೇಲೆ ಬೆಳಕು ಚೆಲ್ಲುವ ದೊಡ್ಡ ಶಕ್ತಿ ಎಂದು ತಿಳಿಸಿದರು.

ಸಮಾಜ ಸೇವಕ ಸಿದ್ದು ಮೊಗಲಿಶೆಟ್ಟರ್ ಮಾತನಾಡಿ, ಕಲಾವಿದರಿಗೆ ಸಾಂಸ್ಕೃತಿಕ ಭವನ ನೀಡಬೇಕು ಎಂಬ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ನಾಟಕ, ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕಿದೆ. ಸರ್ಕಾರ ಕೂಡ ಕಲಾವಿದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.ಶ್ರೀಸಿದ್ಧಾರೂಢಸ್ವಾಮಿ ಮಠದ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರ ಹಾಗೂ ಸಂಘದ ಅಧ್ಯಕ್ಷ ಸುನಂದಾ ಹೊಸಪೇಟೆ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಭಾರತಿದೇವಿ ಬಾಗಲಕೋಟ, ಮಾಲಾ ಕುಂದಾಪುರ, ನಂದಮ್ಮ ಕಲಕತ್ತಾ, ಶಂಕ್ರಣ್ಣ ಚೌಡಾಪುರ, ಸೈಯದ್‌ ಮಾಸ್ತರ, ಹಾಫಿಜಾ ಬೇಗಂ, ಲಕ್ಷ್ಮೀದೇವಿ ಶಿಗ್ಗಾಂವ ಅವರನ್ನು ಸನ್ಮಾನಿಸಲಾಯಿತು.ಕಾಂಗ್ರೆಸ್ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷೆ ಗಿರಿಜಾ ಹೂಗಾರ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಗೌರವ ಅಧ್ಯಕ್ಷ ಚಂದ್ರಧರ್ ಚಿಂದೋಡಿ, ಉಪಾಧ್ಯಕ್ಷ ಸಂಭಾಜಿ ಕಲಾಲ ಇದ್ದರು.