ಸಾರಾಂಶ
ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರವೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಗ್ರಾಮದ ಯುವಕ ಮಿತ್ರರು ಕಲೆ ಆರಾಧಕರಾಗಿ ನಾಟಕವನ್ನು ಪ್ರಸ್ತುತಿಪಡಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಿರಿಯರು ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಟ್ಟು ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಸ್ವಗ್ರಾಮ ತಾಲೂಕಿನ ಹರಳಹಳ್ಳಿಯಲ್ಲಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಏರ್ಪಡಿಸಿದ್ದ ತ್ರಿಜನ್ಮಮೋಕ್ಷ ಅಥವಾ ಜಯ-ವಿಜಯರ ಶಾಪ ವಿಮೋಚನೆ ಎಂಬ ಪೌರಾಣಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಪೌರಾಣಿಕ ನಾಟಕಗಳಲ್ಲಿಯೂ ಒಂದೊಂದು ರೀತಿಯ ಮೌಲ್ಯಗಳು ಅಡಕವಾಗಿರುತ್ತವೆ ಎಂದರು.ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರವೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಗ್ರಾಮದ ಯುವಕ ಮಿತ್ರರು ಕಲೆ ಆರಾಧಕರಾಗಿ ನಾಟಕವನ್ನು ಪ್ರಸ್ತುತಿಪಡಿಸುತ್ತಿದ್ದಾರೆ ಎಂದರು.
ಇಂದಿನ ಯುವಕಮಿತ್ರರು ನಾಟಕಗಳನ್ನು ಕಲಿಯುವುದರ ಜೊತೆಗೆ ಅವುಗಳಲ್ಲಿರುವ ನೀತಿ, ಮೌಲ್ಯ, ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಾ ಆರಾಧಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲಾ ಹೋಬಳಿಗಳಲ್ಲಿಯೂ ಅಧಿಕ ಮತಗಳನ್ನು ನೀಡಿ ಜಯಗಳಿಸಿದ್ದಾರೆ. ನನಗೆ ಲಭ್ಯವಿರುವ ಅನುದಾನದ ಜೊತೆಗೆ ವಿಶೇಷ ಅನುದಾನಗಳನ್ನು ತಂದು ತಾಲೂಕನ್ನು ಅಭಿವೃದ್ಧಿಗೊಳಿಸಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಹರಳಹಳ್ಳಿ ಗ್ರಾಪಂ ಅಧ್ಯಕ್ಷ ಶಿವಲಿಂಗೇಗೌಡ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ. ಲೋಕೇಶ್, ಗ್ರಾಪಂ ಸದಸ್ಯರಾದ ನಂದಿನಿ ನಾಗಶೆಟ್ಟಿ, ಆರ್.ಕೆ.ಯೋಗೇಶ್, ಉಮಾಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷ ಪಾಪೇಗೌಡ, ಭೈರಾಪುರಹರೀಶ್, ಮುಖಂಡ ಸುಬ್ಬೇಗೌಡ ಸೇರಿ ಹಲವರಿದ್ದರು.