ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ನವರಸಗಳ ಮೂಲಕ ಜೀವನದಲ್ಲಿನ ಅನೇಕ ಸಂಗತಿಗಳನ್ನು ರಂಗದ ಮೇಲೆ ಸಶಕ್ತವಾಗಿ ನಿರೂಪಿಸುವ, ಮನುಷ್ಯನ ಭಾವನೆಗಳನ್ನು ಶುದ್ಧೀಕರಣಗೊಳಿಸುವ ಶಕ್ತಿ ನಾಟಕಗಳಿಗಿದೆ ಎಂದು ವಿ.ಮ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀಶೈಲ ಗೋಲಗೊಂಡ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ.ಬಿ. ಧುತ್ತರಗಿ ಟ್ರಸ್ಟ್ (ಸೂಳೇಭಾವಿ) ಬಾಗಲಕೋಟೆ ವತಿಯಿಂದ ನಡೆದ ಕವಿ ಪಿ.ಬಿ. ಧುತ್ತರಗಿಯವರ ಜನ್ಮ ದಿನಾಚರಣೆ ನಿಮಿತ್ತ ಧುತ್ತರಗಿಯವರ ಸಂಪತ್ತಿಗೆ ಸವಾಲ್ ಮತ್ತು ಡಾ.ಚಂದ್ರಶೇಖರ ಕಂಬಾರ ಅವರ ಬೋಳೇಶಂಕರ ನಾಟಕಗಳ ಓದು-ವಿಮರ್ಶೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಪರಂಪರೆಗೆ ಕನ್ನಡದ ಅನೇಕ ನಾಟಕಕಾರರು ತಮ್ಮದೇ ಆದ ಕೊಡುಗೆ ನೀಡಿದ್ದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಪಿ.ಬಿ. ಧುತ್ತರಗಿ ಅವರು ಅನೇಕ ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ ನಾಟಕಗಳನ್ನು ಬರೆದಿದ್ದು ನಾಟಕ ಪರಂಪರೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಧುತ್ತರಗಿ ಅವರ ಸಂಪತ್ತಿಗೆ ಸವಾಲ್ ನಾಟಕ ಕುರಿತು ಮಾತನಾಡಿದ ಹಿರಿಯ ರಂಗಕರ್ಮಿ ಹಾಗೂ ವಕೀಲರಾದ ಮಹಾಂತೇಶ ಅವಾರಿ, ಶೋಷಣೆಯ ವಿರುದ್ಧ ಮಾತನಾಡುವ, ಬಂಡವಾಳಶಾಹಿ ವ್ಯವಸ್ಥೆ ಪ್ರಶ್ನಿಸುವ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜವನ್ನು ಎಚ್ಚರಿಸುವ ನಾಟಕವಾಗಿದೆ ಎಂದರು.ಡಾ.ಚಂದ್ರಶೇಖರ ಕಂಬಾರ ಅವರ ಬೋಳೇಶಂಕರ ನಾಟಕ ಕುರಿತು ಮಾತನಾಡಿದ ಉಪನ್ಯಾಸಕ ವೀರಭದ್ರಯ್ಯ ಶಶಿಮಠ, ನೆಲಮೂಲ ಸಂಸ್ಕೃತಿಯೊಂದಿಗೆ ಆಧುನಿಕತೆಯ ಸಂಘರ್ಷದ ವಿವಿಧ ಮಜಲುಗಳನ್ನು, ಉತ್ತರ ಕರ್ನಾಟಕದ ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡು ಗ್ರಾಮ ಮತ್ತು ನಗರಗಳ ನಡುವಿನ ಹೋಲಿಕೆ, ಸೂಕ್ಷ್ಮ ಸ್ವಭಾವದವರು ಅನುಭವಿಸುವ ಯಾತನೆಗಳು, ಶ್ರಮ ಸಂಸ್ಕೃತಿ ಮತ್ತು ವರ್ಗ ಸಂಘರ್ಷ, ನೋವು ಕೊಟ್ಟವರಿಗೂ ಮಾನವೀಯತೆ ಮೂಲಕ ಉತ್ತರಿಸುವ ಆಶಯವನ್ನು ವಿಶೇಷವಾಗಿ ಶಿವಾಪುರ ಗ್ರಾಮದಲ್ಲಿ ನಡೆಯುವ ಅನೇಕ ಘಟನೆಗಳನ್ನು ಈ ನಾಟಕದ ಮೂಲಕ ತಿಳಿಯಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಬಿ. ಧುತ್ತರಗಿ ಟ್ರಸ್ಟಿನ ಅಧ್ಯಕ್ಷ ಎಸ್.ಕೆ. ಕೊನೆಸಾಗರ, ನಾಟಕಗಳು ಮಾನವ ಸಮಾಜದ ಬದುಕಿನ ಪ್ರತಿಬಿಂಬಗಳಂತಿದ್ದು, ಒಂದು ನಾಟಕ ಸಮಾಜದ ಮಹತ್ವದ ಸ್ಥಿತ್ಯಂತರಗಳಿಗೆ ಕಾರಣವಾಗುತ್ತದೆ. ಜೊತೆಗೆ ಸಮಾಜದಲ್ಲಿ ವೈಚಾರಿಕ ಬೆಳಕು ನೀಡಿ ಹಲವು ಬದಲಾವಣೆಗೆ ಕಾರಣವಾಗುತ್ತದೆ ಎಂದು ಹೇಳಿದರು.ನಗರದ ಹಿರಿಯ ರಂಗ ಕಲಾವಿದ ಅನಂತ ಬಬಲೇಶ್ವರ ಟ್ರಸ್ಟಿನ ಸದಸ್ಯರಾದ ಇಬ್ರಾಹಿಂ ಕನಸಾವಿ ಮತ್ತು ಸುನಂದಾ ಕಂದಗಲ್ಲ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುತ್ತಣ್ಣ ಗಂಜಿಹಾಳ, ಹುಚ್ಚೇಶ ಕಾಳಹಸ್ತಿಮಠ, ಪ್ರಭು ನಾಗೂರ ವೇದಿಕೆಯಲ್ಲಿದ್ದರು. ರಂಗಾಸಕ್ತರಾದ ಜಿ.ಬಿ. ಕಂಬಾಳಿಮಠ, ಡಾ.ಎಂ.ಬಿ. ಒಂಟಿ, ಸಿದ್ದಲಿಂಗಪ್ಪ ಬೀಳಗಿ, ಶಿವಪುತ್ರಪ್ಪ ತಾರಿವಾಳ, ಪಿ.ಐ. ಮುಚಖಂಡಿ, ಟ್ರಸ್ಟಿನ ಸಿಬ್ಬಂದಿ ರಾಜೇಶ ಸರೂರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಇದೇ ಸಂದರ್ಭದಲ್ಲಿ ಕುವೆಂಪು ಮತ್ತು ಇತರ ನಾಟಕಗಳ ಫೋಟೋ ಪ್ರದರ್ಶನ ಏರ್ಪಡಿಸಲಾಗಿತ್ತು.
ಸೇವಂತಿ ಬೆಣಗಿ ಪ್ರಾರ್ಥಿಸಿದರು. ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಕರ್ಣಕುಮಾರ ಜೈನಾಪೂರ ವಂದಿಸಿದರು. ಉಪನ್ಯಾಸಕ ಐ.ಎಚ್. ನಾಯಕ ನಿರೂಪಿಸಿದರು.