ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನೀರು ನಿಯಂತ್ರಣ ಸಮಿತಿ ಕೆಆರ್‌ಎಸ್ ಜಲಾಶಯದಿಂದ ಪ್ರತಿನಿತ್ಯ ೩೫೦೦ ಕ್ಯೂಸೆಕ್‌ನಂತೆ ೧೫ ದಿನಗಳ ಕಾಲ ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂಬ ಶಿಫಾರಸನ್ನು ವಿರೋಧಿಸಿ ವಿವಿಧ ಕನ್ನಡ ಮತ್ತು ಜನಪರ ಸಂಘಟನೆಗಳು ಒಣಗಿದ ಕಬ್ಬನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಯಚಾಮರಾಜೇದ್ರ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಕರುನಾಡ ಸೇವಕರು ಸಂಘಟನೆ ವಿದ್ಯಾರ್ಥಿಗಳು ಜಮಾವಣೆಗೊಂಡು ಸಮಿತಿ ನಿಲುವಿನ ವಿರುದ್ಧ ಘೋಷಣೆ ಕೂಗಿ ಒಣಗಿದ ಕಬ್ಬಿನ ಕಂತೆಯನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹೊತ್ತಿನಲ್ಲಿ ತಮಿಳುನಾಡು ಭಾಗದ ಬೆಳೆಗಳಿಗೆ ಪ್ರತಿನಿತ್ಯ ೩೫೦೦ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ರಾಷ್ಟ್ರೀಯ ದುರಂತವಾಗಿದೆ ಎಂದರು.ಕುಡಿಯುವ ನೀರು ಮತ್ತು ಬೆಳೆಗಳ ರಕ್ಷಣೆ ಮೊದಲ ಆದ್ಯತೆಯಾಗಿದ್ದು, ಈಗಾಗಲೇ ಬೆಳೆದ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಿದೆ. ಕೆ.ಆರ್‌ಎಸ್ ಕನಿಷ್ಠ ಪ್ರಮಾಣದ ಈರಿದೆ. ಪರಿಸ್ಥಿತಿಯನ್ನು ಅವಲೋಕಿಸದೆ ನೀರು ನಿಯಂತ್ರಣ ಸಮಿತಿ ನೀರು ಬಿಡುವ ಆದೇಶವನ್ನು ಹೊರಡಿಸಿರುವುದು ಅವೈಜ್ಞಾನಿಕ ಎಂದು ಆರೋಪಿಸಿದರು.
ಕಾವೇರಿ ಹೆಸರಿನಲ್ಲಿ ರಚನೆಯಾಗಿರುವ ಪ್ರಾಧಿಕಾರ ಅಥವಾ ಸಮಿತಿಗಳು ಕೇಂದ್ರದ ಕೈಗೊಂಬೆಯಾಗಿ ವರ್ತಿಸಬಾರದು. ದಕ್ಷಿಣ ರಾಜ್ಯಗಳ ಗಡಿ ಮತ್ತು ಜಲ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸುವ ಪ್ರಯತ್ನ ಮಾಡಬೇಕೇ ವಿನಃ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸಬಾರದು. ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ರಚಿಸುವ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.
ಕರುನಾಡ ಸೇವಕರು ಸಂಘಟನೆ ಎಂ.ಬಿ.ನಾಗಣ್ಣಗೌಡ ಮಾತನಾಡಿ, ನೀರು ನಿಯಂತ್ರಣ ಸಮಿತಿಯ ಆದೇಶ ಮರಣ ಶಾಸನವಾಗಿದೆ. ಪ್ರತಿ ಬಾರಿ ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದ್ದು, ಎಲ್ಲ ಶಾಸಕರು ಮತ್ತು ಸಂಸದರು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಬದ್ದತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ, ಮುಖಂಡರಾದ ಎಸ್.ಪಿ. ನಾರಾಯಣಸ್ವಾಮಿ, ಸೋಮಶೇಖರ್ ಇತರರು ಇದ್ದರು.