ಬತ್ತಿದ ತುಂಗಭದ್ರೆ: ಹರಪನಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

| Published : Mar 21 2024, 01:07 AM IST

ಬತ್ತಿದ ತುಂಗಭದ್ರೆ: ಹರಪನಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆಯ 72 ಕೊಳವೆ ಬಾವಿಗಳಿದ್ದು, ಇವುಗಳಲ್ಲಿ ಅಂತರ್ಜಲ ಕುಸಿದಿದೆ. ಸ್ವಲ್ಪ ಮಟ್ಟಿನ ನೀರು ಬರುತ್ತದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಜೀವನಾಡಿ ತುಂಗಭದ್ರೆ ಬತ್ತುತ್ತಿದೆ. ಇದರಿಂದ ಹರಪನಹಳ್ಳಿ ಪಟ್ಟಣದ ಜನತೆ ಕುಡಿಯುವ ನೀರಿನ ಆತಂಕ ಎದುರಿಸುವಂತಾಗಿದೆ.ಪಟ್ಟಣ ಅಂದಾಜು 60 ಸಾವಿರ ಜನಸಂಖ್ಯೆ ಹೊಂದಿದೆ. ಹೊಸ ಬಡಾವಣೆಗಳು ತಲೆ ಎತ್ತಿವೆ. ಇಲ್ಲಿಗೆ 30 ಕಿ.ಮೀ. ದೂರದ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪುರಸಭೆಯವರು ಪೂರೈಕೆ ಮಾಡುತ್ತಿದ್ದಾರೆ. ಆದರೆ ನದಿ ಬತ್ತಿದ್ದು, ಪುರಸಭೆಯವರು ನೀರು ಸರಬರಾಜಿಗೆ ನದಿಯಲ್ಲಿ ಸ್ಥಾಪಿಸಿರುವ ಇಂಟೆಂಕ್‌ ವೆಲ್‌ ಗೆ ನೀರು ಸಿಗದ ಕಾರಣ 5 ಎಚ್‌ ಪಿಯ 5 ಮೋಟಾರುಗಳನ್ನು ಅಳವಡಿಸಿ ಪೈಪುಗಳನ್ನು ಹಾಕಿ ಜಾಕ್‌ ವೆಲ್‌ ಗೆ ಪಂಪ್‌ ಮಾಡಲು ಸದ್ಯ ಕ್ರಮ ಕೈಗೊಂಡಿದ್ದಾರೆ. ನದಿಗೆ ಅಡ್ಡಲಾಗಿ ಒಡ್ಡನ್ನು ಸಹ ಕಟ್ಟಿದ್ದಾರೆ. ಅದರಿಂದ ಈಗ ಹರಪನಹಳ್ಳಿ ಪಟ್ಟಣಕ್ಕೆ 2-3 ದಿನಗಳಿಗೊಮ್ಮೆ ನದಿ ನೀರು ಪೂರೈಕೆಯಾಗುತ್ತಿದೆ.ಅಂತರ್ಜಲ ಕುಸಿತ: ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆಯ 72 ಕೊಳವೆ ಬಾವಿಗಳಿದ್ದು, ಇವುಗಳಲ್ಲಿ ಅಂತರ್ಜಲ ಕುಸಿದಿದೆ. ಸ್ವಲ್ಪ ಮಟ್ಟಿನ ನೀರು ಬರುತ್ತದೆ. ಯಾರಾದರೂ ಖಾಸಗಿ ಬೋರ್‌ ವೆಲ್‌ ಗಳಿಂದ ನೀರು ಕೊಡಲು ಮುಂದಾದರೆ ಅಂತಹ ಬೋರ್ ಮಾಲೀಕರಿಗೆ ಮಾಸಿಕ 9 ಸಾವಿರ ಬಾಡಿಗೆ ನೀಡಲಾಗುವುದು ಎನ್ನುತ್ತಾರೆ ಪುರಸಭೆಯವರು.ನೀರನ್ನು ಮಿತವಾಗಿ ಬಳಸಿ, ಅನಗತ್ಯವಾಗಿ ನೀರನ್ನು ಪೋಲು ಮಾಡಬೇಡಿ ಎಂದು ಪುರಸಭೆಯವರು ಸಾಮಾಜಿಕ ಜಾಲತಾಣ ಹಾಗೂ ಕಸ ವಿಲೇವಾರಿ ವಾಹನದ ಧ್ವನಿ ವರ್ಧಕ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.ಅರವಟ್ಟಿಗೆ ಸ್ಥಾಪನೆ: ಸುಡು ಬಿಸಿಲು ಇರುವುದರಿಂದ ಹಳ್ಳಿಗಳಿಂದ ಪಟ್ಟಣಕ್ಕೆ ವಿವಿಧ ಕೆಲಸ, ಕಾರ್ಯಗಳಿಗೆ ಆಗಮಿಸುವ ಜನರಿಗೆ ದಾಹ ತಣಿಸಲು ಹರಪನಹಳ್ಳಿ ಪಟ್ಟಣದ ಹೊಸ ಬಸ್‌ ನಿಲ್ದಾಣದ ಬಳಿ ಪುರಸಭೆಯವರು ಅರವಟ್ಚಿಗೆ ಸ್ಥಾಪನೆ ಮಾಡಿದ್ದಾರೆ. ಇನ್ನು ಕೆಲವೊಂದು ಕಡೆ ಅರವಟ್ಟಿಗೆ ಆರಂಭಿಸುವ ಯೋಜನೆ ಹೊಂದಿದ್ದಾರೆ.ನದಿಯಲ್ಲಿ ಈಗ ಪೈಪುಗಳನ್ನು ಹಾಕಿ ಜಾಕ್‌ ವೆಲ್‌ ಗೆ ನೀರು ಪೂರೈಕೆಯಾಗುವ ಹಾಗೆ ಮಾಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಆ ಪೈಪುಗಳಿಗೂ ನೀರು ಸಿಗದ ಪರಿಸ್ಥಿತಿ ಉದ್ಬವವಾಗುವ ಲಕ್ಷಣಗಳಿವೆ. ಇಲ್ಲಿ ಪಟ್ಟಣದ ಬೋರ್‌ಗಳು ಬತ್ತುತ್ತಿವೆ. ಖಾಸಗಿ ಬೋರುಗಳ ನೆರವು ಪಡೆಯಲು ಯೋಜಿಸಿದ್ದು, ಖಾಸಗಿ ಕೊಳವೆಬಾವಿಗಳು ಸಹ ಬತ್ತುತ್ತಿವೆ. ಹೀಗಾದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.ಹರಪನಹಳ್ಳಿ ಪಟ್ಟಣದ ಪರಿಸ್ಥಿತಿ ಹೀಗಾದರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಭಾರಿ ಹಾಹಾಕಾರ ಎದ್ದಿದೆ. ಗ್ರಾಮೀಣ ಭಾಗದಲ್ಲಿ 64 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ತಾಲೂಕು ಆಡಳಿತ ಪಡೆದಿದೆ. ಹುಣಸಿಕಟ್ಟಿ ಗ್ರಾಮದಲ್ಲಿ ಖಾಸಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ತುಂಗಭದ್ರ ನದಿಯಲ್ಲಿ ನೀರು ಕಡಿಮೆ ಇದೆ. ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಹರಪನಹಳ್ಳಿ ಪಟ್ಟಣದ ಜನತೆ ಹಿತ-ಮಿತವಾಗಿ ಹಾಗೂ ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕು ಎನ್ನುತ್ತಾರೆ ಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ.