ಶುದ್ಧೀಕರಿಸಿದ ಆರ್‌ಒ ಪ್ಲಾಂಟ್, ಜೆಜೆಎಂ ಪೂರೈಕೆ ನೀರು ಕುಡಿಯಿರಿ: ಅಕ್ರಂ ಅಲಿ ಷಾ

| Published : Jun 22 2025, 11:47 PM IST

ಶುದ್ಧೀಕರಿಸಿದ ಆರ್‌ಒ ಪ್ಲಾಂಟ್, ಜೆಜೆಎಂ ಪೂರೈಕೆ ನೀರು ಕುಡಿಯಿರಿ: ಅಕ್ರಂ ಅಲಿ ಷಾ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್‌ನಿಂದ ಪೂರೈಕೆಯಾಗುವ ನೀರನ್ನು ಕಡ್ಡಾಯವಾಗಿ ಕುಡಿಯಲು ಬಳಸಬೇಕು.

ಜಿಪಂ ಸಿಇಒ ಸಲಹೆ, ನೀರು-ನೈರ್ಮಲ್ಯ ಮಿಷನ್ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಆರೋಗ್ಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್‌ನಿಂದ ಪೂರೈಕೆಯಾಗುವ ನೀರನ್ನು ಕಡ್ಡಾಯವಾಗಿ ಕುಡಿಯಲು ಬಳಸಬೇಕು ಎಂದು ಜಿಪಂನ ಸಿಇಒ ಅಕ್ರಂ ಅಲಿ ಷಾ ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬೇಸಿಗೆ ಮುಗಿದು ಮಳೆಗಾಲ ಆರಂಭವಾದ ಹಿನ್ನೆಲೆ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿದೆ ಎಂದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರೋಗ್ಯ ಹಿತದೃಷ್ಟಿಯಿಂದ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನವಿರಲಿ. ಮನೆಗಳಲ್ಲಿ ಬಳಸುವ ನೀರಿನ ಮೂಲಗಳು ಬಾವಿ, ಕೊಳವೆ ಬಾವಿ, ಸಂಗ್ರಹ ಟ್ಯಾಂಕ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಿ. ಕುಡಿಯುವ ನೀರನ್ನು ಆರ್‌ಒ ಪ್ಲಾಂಟ್‌ಗಳು ಹಾಗೂ ಜಲ ಜೀವನ್ ಮಿಷನ್‌ನಲ್ಲಿ ಪೂರೈಕೆಯಾಗುತ್ತಿರುವ ನೀರನ್ನು ಕಡ್ಡಾಯವಾಗಿ ಕುಡಿಯಬೇಕು. ನೇರವಾಗಿ ಬೋರ್‌ವೆಲ್‌ ಮೂಲಕ ಬರುವ ನೀರನ್ನು ಕುಡಿಯುವುದನ್ನು ಕೈಬಿಡಬೇಕು. ಸಾಧ್ಯವಾದರೆ ನೀರನ್ನು ಕುದಿಸಿ ಆರಿಸಿ, ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಗ್ರಾಮದಲ್ಲಿ ಸರಬರಾಜು ಆಗುವ ನೀರನ್ನು ಬಳಸಬಹುದು. ಕಲುಷಿತ ನೀರು ಸೇವನೆಯಿಂದ ಕಾಲರಾದಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ ಎಂದರು.

ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ:

ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ, ಹೂವಿನ ಕುಂಡಗಳು, ಒಡೆದ ಪಾತ್ರೆಗಳು, ಟೈರ್‌ಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಸೊಳ್ಳೆಗಳಿಂದ ಡೆಂಘೀ, ಮಲೇರಿಯಾ, ಚಿಕೂನ್‌ ಗುನ್ಯಾದಂತಹ ಕಾಯಿಲೆಗಳು ಹರಡುತ್ತವೆ. ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕ ಕ್ರೀಂಗಳನ್ನು ಬಳಸಬೇಕು. ಕುಡಿಯುವ ನೀರು ಮತ್ತು ನೈರ್ಮಲ್ಯತೆಗೆ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು.

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ ಮಾತನಾಡಿ, ಹಂಪಿಯ ಎಂ.ಪಿ. ಪ್ರಕಾಶ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಸದ್ಯದಲ್ಲಿ ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ವಿದ್ಯುತ್ ವ್ಯತ್ಯಯವಾದಲ್ಲಿ ನೀರು ಸರಬರಾಜು ಮಾಡಲು ಸಮಸ್ಯೆಯಾಗಿದೆ. ಹಂಪಿ ಪ್ರಾಧಿಕಾರದಿಂದ ಟ್ಯಾಂಕ್ ನಿರ್ಮಾಣಕ್ಕೆ ಅನುಮತಿ ನೀಡಲು ಒಪ್ಪಲಾಗಿದೆ ಎಂದರು.

ಬೈಲುವದ್ದಿಗೇರಿ ಗ್ರಾಪಂ ಅಧ್ಯಕ್ಷೆ ಜೆ. ಲಕ್ಷ್ಮೀದೇವಿ, ಜಿಪಂ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಜಿಲ್ಲಾ ಕಾರ್ಯಪಾಲಕ ಅಭಿಯಂತರೆ ದೀಪಾ, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ, ಜಿಲ್ಲಾ ಬುಡಕಟ್ಟು ಕಲ್ಯಾಣ ಅಧಿಕಾರಿ ರವಿಕುಮಾರ್, ಜಿಲ್ಲಾ ಐಸಿಡಿಎಸ್ ಅಧಿಕಾರಿ ಸುಭದ್ರಾ ಇದ್ದರು.