ರಾಮನಗರ: ಮಂಚನಬೆಲೆ ಜಲಾಶಯದಿಂದ ಬಹು ಉದ್ದೇಶಿತ ಕುಡಿಯುವ ನೀರು ಯೋಜನೆಯಡಿ ರಾಮನಗರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 118 ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ಮಂಚನಬೆಲೆ ಜಲಾಶಯದಿಂದ ಬಹು ಉದ್ದೇಶಿತ ಕುಡಿಯುವ ನೀರು ಯೋಜನೆಯಡಿ ರಾಮನಗರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 118 ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಂಚನಬೆಲೆ ಜಲಾಶಯದಲ್ಲಿ ನಿರ್ಮಿಸುತ್ತಿರುವ ಪಂಪ್‌ಹೌಸ್, ಕೆಂಪದ್ಯಾಪನಹಳ್ಳಿ ಬಳಿ 7.5ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ದೀಕರಣ ಪ್ಲಾಂಟ್, ಲಕ್ಕನದೊಡ್ಡಿ ಬಳಿ 75 ಸಾವಿರ ಸಾಮರ್ಥ್ಯದ ವಾಟರ್ ಟ್ಯಾಂಕ್ ನಿರ್ಮಾಣ ಹಂತದ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮನಗರ ವಿಧಾನಸಭಾ ಕ್ಷೇತ್ರದ ಕಸಬಾ, ಕೈಲಾಂಚ ಹೋಬಳಿ ಹಾಗೂ ಮಾಗಡಿ ಕ್ಷೇತ್ರದ ಬಿಡದಿ ಗ್ರಾಮೀಣ ಭಾಗದ ಗ್ರಾಮಗಳಿಗೆ 464 ಕೋಟಿ ರುಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಈಗಾಗಲೇ ಯೋಜನೆಯ ಕೆಲಸ ಶೇಕಡ 50 ರಷ್ಟು ಪೂರ್ಣಗೊಂಡಿದ್ದು, ಗುರುತ್ವಾಕರ್ಷಣೆಯ ಮೂಲಕ ಎಲ್ಲ ಗ್ರಾಮಗಳ ಟ್ಯಾಂಕ್‌ಗಳಿಗೆ ನೀರು ಪೂರೈಸಲಾಗುವುದು. ಜೊತೆಗೆ ಜೆಜೆಎಂ ಯೋಜನೆಯ ಟ್ಯಾಂಕ್‌ಗಳಿಗೂ ನೀರು ತುಂಬಿಸಿ ಸಮರ್ಪಕವಾಗಿ ಎಲ್ಲ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಮಂಚನಬೆಲೆ ಜಲಾಶಯದಿಂದ ನೀರನ್ನು ಶುದ್ದೀಕರಿಸಿ ಸುಮಾರು 75 ಸಾವಿರ ಜನಸಂಖ್ಯೆಯಿರುವ ಕಸಬಾ ಮತ್ತು ಕೈಲಾಂಚ ಭಾಗಕ್ಕೆ ನೀರು ಪೂರೈಸಲಾಗುವುದು. ಕೈಲಾಂಚ ಭಾಗದಲ್ಲಿ ಪೈಪ್‌ಲೈನ್ ಕೆಲಸ ನಡೆದಿದ್ದು, ಇನ್ನು ಕೆಲವು ಕಡೆ ಪೈಪ್‌ಲೈನ್ ಕೆಲಸ ಮಾಡಲಾಗುವುದು. ಕೆಂಪದ್ಯಾಪನಹಳ್ಳಿ ಬಳಿ 7.5 ಲಕ್ಷ ಸಾಮರ್ಥ್ಯದ ಬೃಹತ್ ಶುದ್ದೀಕರಣ ಪ್ಲಾಂಟ್ ನಿರ್ಮಾಣವಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಮಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಜ್ಙಾನಮೂರ್ತಿ, ಎಇಇ ಶ್ರೀಪಾದ, ಎಇ ನಿಖಿಲ್, ಗುತ್ತಿಗೆದಾರ ಪ್ರತಿನಿಧಿ ರಘುನಂದನ್, ಮಂಚನಬೆಲೆ ಯೋಜನಾ ವಿಭಾಗದ ಎಇಇ ಉಮೇರಾ, ಜೆಇ ಹೇಮಾನಾಯಕ್, ಮುಖಂಡರಾದ ವಾಸು, ಚಿಕ್ಕಸ್ವಾಮಿ, ಗೋವಿಂದರಾಜು, ಶಿವಣ್ಣ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಪಿಎಂಸಿ ಸಿಬ್ಬಂದಿ ಹಾಜರಿದ್ದರು.

8ಕೆಆರ್ ಎಂಎನ್ 2.ಜೆಪಿಜಿ

ಮಂಚನಬೆಲೆ ಜಲಾಶಯದಲ್ಲಿ ನಿರ್ಮಿಸುತ್ತಿರುವ ಪಂಪ್‌ಹೌಸ್ ಕಾಮಗಾರಿಯನ್ನು ಶಾಸಕ ಇಕ್ಬಾಲ್ ಹುಸೇನ್ ವೀಕ್ಷಣೆ ಮಾಡಿದರು.