ಜೇವರ್ಗಿಯ 35 ಹಳ್ಳಿಗಳಿಗೆ ಕುಡಿಯುವ ನೀರು

| Published : Feb 10 2024, 01:46 AM IST

ಸಾರಾಂಶ

₹106 ಕೋಟಿ ಮೊತ್ತದ ಜಲ್‌ ಜೀವನ್‌ ಮಿಷನ್‌ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಡಾ.ಅಜಯ್‌ಸಿಂಗ್‌ ಅಭಿನಂದನೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಲ್‌ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾಳವಾರ್‌ ಸೇರಿದಂತ 24 ವಸತಿ ಪ್ರದೇಶಗಳು ಹಾಗೂ ಕೂಡಿ ಸೇರಿದಂತೆ 11 ಗ್ರಾಮಗಳು ಸೇರಿದಂತೆ 35 ಗ್ರಾಮಗಳಿಗೆ 106 ಕೋಟಿ ರು. ಅಂದಾಜು ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿರುವಂತಹ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ದೊರಕಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಹೇಳಿದ್ದಾರೆ.

ಈ ವಿಷಯದ ಕುರಿತಂತೆ ವಿಸ್ತೃತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಯೋಜನೆಗಳ ಅನುಷ್ಠಾನದಿಂದ ಜೇವರ್ಗಿ ಮತಕ್ಷೇತ್ರದಲ್ಲಿರುವ 31 ಹಳ್ಳಿಗಳಲ್ಲಿ ನಿರಂತರ ಕುಡಿಯುವ ನೀರಿನ ಪೂರೈಕೆಯಾಗಲಿದೆ. ಇದು ಆಯಾ ಗ್ರಾಮಗಳಲ್ಲಿ ನಿರಂತರ ಜಲಕ್ರಾಂತಿಗೆ ಕಾರಣವಾಗಲಿದೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ನಿರ್ಣಯಕ್ಕಾಗಿ ಕಾಂಗ್ರೆಸ್‌ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಸೇರಿದಂತೆ ಸಂಪುಟದ ಎಲ್ಲರಿಗೂ ಅಭಿನಂದಿಸಿದ್ದಾರೆ.ಯಾಳವಾರ ಬಹುಗ್ರಾಮ ಯೋಜನೆಗೆ 79 ಕೋಟಿ ರು. ಮೀಸಲು

ಜೇವರ್ಗಿ ತಾಲೂಕಿನ ಯಾಳವಾರ್‌ ಮತ್ತು ಸುತ್ತಲಿನ 24 ವಸತಿ ಪ್ರದೇಶಗಳು (21 ಗ್ರಾಮಗಳು, 3 ತಾಂಡಾಗಳು) 79 ಕೋಟಿ ರು ವೆಚ್ಚದಲ್ಲಿ ಸದರಿ ಯೋಜನೆ ಹೊಂದಲಿವೆ. ಈ ಯೋಜನೆಯಂತೆ ನಿತ್ಯ 3. 81 ಮಿಲಿಯನ್‌ ಲೀ. ನೀರು ಯೋಜನೆಯಡಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳಿಗೂ ಪೂರೈಕೆಯಾಗಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಗಂವ್ಹಾರ್‌, ಗಂವ್ಹಾರ್‌ ತಾಂಡಾ, ಮಾರಡಗಿ ಎಸ್‌ಎ, ಮುಡಬಾಳ್‌, ಬಿ ತಾಂಡಾ, ಮುಡಬಾಳ್‌ ಬಿ, ಮುಡಬಾಳ್‌ ಕೆ, ವರ್ಚನಳ್ಳಿ, ಬುಟ್ನಾಳ್‌, ಚನ್ನೂರ್‌, ಗುಡೂರ್‌ ಎಸ್‌ಎ, ಅವರಾದ ಹಾಲಗಡ್ಲ, ಕೊಲ್ಲೂರ್‌, ಶಖಾಪೂರ ಎಸ್‌ಎ, ಜೈನಾಪೂರ, ಜೈನಾಪೂರ ತಾಂಡಾ, ಚಿಗರಳ್ಳಿ, ಕಾದ್ಯಾಪೂರ, ಕೊಡಚಿ, ವಖಣಾಪುರ, ಸಿಗರಥಹಳ್ಳಿ, ಸೋಮನಾಥ ಹಳ್ಳಿ, ಯಾಳವಾರ ಹಾಗೂ ಇಜೇರಿ ಈ 3 ತಂಡಾ ಹಾಗೂ 21 ವಸತಿ ಪ್ರದೇಶ ಸೇರಿದಂತೆ 24 ವಸತಿ ಪ್ರದೇಶಗಳಿಗೆ ಬಹುಗ್ರಾಮ ಯೋಜನೆ ಅನ್ವಯವಾಗಲಿದೆ. ಭೀಮಾನದಿ ನೀರಿನ ಜಲಮೂಲವಾಗಲಿದ್ದು, ಹೋತಿನಮಡು ಬಳಿ ಜಾಕ್ವೆಲ್‌, ಮಾರಡಗಿ ಎಸ್‌ಎ ಬಳಿ ನೀರಿನ ಸುದ್ದೀಕರಣ ಘಟಕ ತಲೆ ಎತ್ತಲಿವೆ.27 ಕೋಟಿ ರು. ಮೊತ್ತದಲ್ಲಿ ಕೂಡಿ ಬಹುಗ್ರಾಮ ಯೋಜನೆ ಅನುಷ್ಠಾನ

ಇನ್ನು ಕೋಡಿ ಬಹುಗ್ರಾಮ ಯೋಜನೆಯನ್ನು 27 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕೂಡಿ ಮತ್ತು ಇತರೆ 11 ಗ್ರಾಮಗಳಿಗೆ ನೀರು ಪೂರೈಸುವ ಈ ಯೋಜನೆಯಡಿಯಲ್ಲಿ ಪ್ರತಿನಿತ್ಯ ಗ್ರಾಮಗಳಿಗೆ 1. 63 ಮಿಲಿಯನ್‌ ಲೀ. ನೀರು ಪೂರೈಕೆಯಾಗಲಿದೆ. ಕೂಡಿ, ಕೋನ ಹಿಪ್ಪರಗಾ, ಮುಂದರವಾಡ, ಕೋಬಾಳ, ರಾಸಣಗಿ, ಹದನೂರ್‌, ಬಣಮಿ, ಹರವಾಳ, ಗೌನಳ್ಳಿ, ಜನಿವಾರ್‌, ಕೋಳಕೂರ್‌ ಹಾಗೂ ರದ್ದೇವಾಡಗಿ ಈ ಯೋಜನೆ ವ್ಯಾಪ್ತಿಗೊಳಪಡುವ ಫಲಾನುಭವಿ ಗ್ರಾಮಗಳಾಗಿವೆ.

ಈ ಯೋಜನೆಗೂ ಭೀಮಾ ನದಿಯೇ ಜಲಮೂಲವಾಗಿದ್ದು ರಾಸಣಗಿ ಬಳಿಯೇ ಜಾಕ್ವೇಲ್‌ ಹಾಗೂ ನೀರಿನ ಶುದ್ದೀಕರಣ ಘಟಕಗಳೆರಡೂ ನಿರ್ಮಾಣವಾಗಲಿವೆ. ಇವೆರಡೂ ಯೋಜನೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ 35 ಜನ ವಸತಿ ಪ್ರದೇಶಗಳಿಗೆ ಸಮಸ್ಯೆ ಇನ್ನಿಲ್ಲದಂತಾಗಲಿದೆ. ಇದರಿಂದ ಜನ- ಜಾನುವಾರಗಳಿಗೆ ಕಾಯಂ ಜಲಮೂಲ ದೊರಕಲಿದೆ. ಶೀಘ್ರದಲ್ಲೇ ಯೋಜನೆಗಳು ಕಾರ್ಯಗತಗೊಂಡು ಹೆಚ್ಚಿನ ಅನುಕೂಲ ಜನತೆಗೆ ಕಲ್ಪಿಸುವ ವಿಶ್ವಾಸವನ್ನು ಶಾಸಕರಾದ ಡಾ. ಅಜಯ್‌ ಧರ್ಮಸಿಂಗ್‌ ವ್ಯಕ್ತಪಡಿಸಿದ್ದಾರೆ.