ವಿಶೇಷ ವರದಿ
ಮುಳಗುಂದ: ಸಮೀಪದ ಸೊರಟೂರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಪೈಪಲೈನಅನ್ನು ಚರಂಡಿಯಲ್ಲೇ ಹಾಕಲಾಗಿದ್ದು, ಇದರಿಂದ ಗ್ರಾಮದ ಜನ ಕಲುಷಿತ ನೀರು ಸೇವಿಸುವಂತಾಗಿದೆ. ಗ್ರಾಮದಲ್ಲಿ ಸ್ವಚ್ಛತೆಯು ಮರೀಚಿಕೆಯಾಗಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.ಹಳಿಕೆಮ್ಮ ದೇವಿ ದೇವಸ್ಥಾನ ಎದುರುಗಡೆ ಇರುವ ಕುಡಿಯುವ ನೀರಿನ ಟ್ಯಾಂಕ್‌ಗೆ ಜೋಡಿಸಲಾದ ನೀರಿನ ಪೈಪ್ ಚರಂಡಿಯಲ್ಲೇ ಹಾಯ್ದು ಬರುವುದರಿಂದ ಪೈಪ್ ಲೈನ್ ಅಲ್ಲಲ್ಲಿ ಸೋರುತ್ತಿದೆ. ಇದರಿಂದ ಚರಂಡಿ ನೀರು ಟ್ಯಾಂಕಿಗೆ ಸೇರುತ್ತಿದ್ದು, ನಿತ್ಯ ಬಳಕೆಗೆ ಕಲುಷಿತ ನೀರೇ ಗತಿಯಾಗಿದೆ. ಸಾರ್ವಜನಿಕರು ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದಾರೆ. ಕೂಡಲೇ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ. ಇಲ್ಲವಾದಲ್ಲಿ ಗ್ರಾಪಂ ಮುಂದೆ ಧರಣಿ ನಡೆಸುವ ಎಚ್ಚರಿಕೆ ತಿಳಿಸಿದ್ದಾರೆ.ಗ್ರಾಮದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ದುರ್ನಾತ ಬೀರುತ್ತಿದ್ದು, ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದರಿಂದ ವೃದ್ಧರು, ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಗ್ರಾಮಸ್ಥರು ಸಾಕಷ್ಟು ಬಾರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗ್ರಾಮದ ಸೌಂದರ್ಯ ಹೆಚ್ಚಿಸಲು ಸುಗಮ ಸಂಚಾರಕ್ಕೆ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿದ್ದು, ಅವುಗಳೆಲ್ಲ ಅವೈಜ್ಞಾನಿಕ ಚರಂಡಿಗಳಾಗಿವೆ. ಅಲ್ಲದೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಅದನ್ನು ಸರಿಯಾಗಿ ಸ್ವಚ್ಛಗೊಳಿಸದೇ ಚರಂಡಿ ನೀರು ಮುಂದೆ ಸಾಗದೇ ಇರುವುದರಿಂದ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಿದೆ. ಮಕ್ಕಳು, ವೃದ್ಧರು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದು, ಅನಾರೋಗ್ಯದಿಂದ ಬಳಲುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಅನಾರೋಗ್ಯ ಸಮಸ್ಯೆ: ಸೊರಟೂರು ಗ್ರಾಮದ ಹಲವು ವಾರ್ಡಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಚರಂಡಿಯಲ್ಲೇ ನೀರಿನ ಪೈಪ್ ಲೈನ್ ಜೋಡಣೆಯಾಗಿವೆ. ಇದರಿಂದ ಕಲುಷಿತ ನೀರು ಬಳಕೆಯಿಂದ ಸಾಕಷ್ಟು ಜನರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೂಡಲೇ ಸರಿಪಡಿಸದೇ ಹೋದಲ್ಲಿ ಸಾರ್ವಜನಿಕರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರಾದ ವೆಂಕಟೇಶ ರಣತೂರ ತಿಳಿಸಿದರು.ಶೀಘ್ರ ಹೊಸ ಪೈಪ್ಲೈನ್: ನಿತ್ಯ ಚರಂಡಿ ಸ್ವಚ್ಛ ಮಾಡಲಾಗುತ್ತಿದ್ದು, ಚರಂಡಿಯಲ್ಲಿನ ನೀರಿನ ಪೈಪ್ಲೈನ ಬೇರೆ ಕಡೆಗೆ ಹಾಕಿಸುವ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಹೊಸ ಪೈಪ್ಲೈನ್ ಜೋಡಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುತ್ತೇವೆ ಎಂದು ಪಿಡಿಒ ಸಂತೋಷ ಎಂ.ಎಚ್. ತಿಳಿಸಿದರು.