ಕುಡಿಯುವ ನೀರು ಪೂರೈಕೆ ವ್ಯತ್ಯಯ; ಜನರಿಗೆ ಸಮಸ್ಯೆ

| Published : Feb 06 2024, 01:38 AM IST

ಕುಡಿಯುವ ನೀರು ಪೂರೈಕೆ ವ್ಯತ್ಯಯ; ಜನರಿಗೆ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಾತಿ ಗ್ರಾಮದ ಪಂಪ್‌ಹೌಸ್‌ಗೆ ನಿರಂತರ ವಿದ್ಯುತ್‌ ಪೂರೈಕೆಯಾಗದ ಕಾರಣ ದಿನದಿನಕ್ಕೂ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದಿನವೊಂದಕ್ಕೆ ಹಲವು ಬಾರಿ ವಿದ್ಯುತ್‌ ಕಡಿತವಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು, ನಿರಂತರವಾಗಿ ಪಂಪ್‌ ಹೌಸ್‌ಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದರಿಂದ ಪಾಲಿಕೆಯಿಂದ ಸಮರ್ಪಕ ನೀರು ಪೂರೈಸಲು ಸೂಚನೆ ನೀಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ 15 ದಿನದಿಂದಲೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಮಹಾ ನಗರಕ್ಕೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಅರ್ಪಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ರನ್ನು ಭೇಟಿ ಮಾಡಿದ ಪಾಲಿಕೆ ವಿಪಕ್ಷ ಬಿಜೆಪಿ ಸದಸ್ಯರ ನಿಯೋಗವು, ಜಿಲ್ಲಾ ಕೇಂದ್ರದಲ್ಲಿ ಕಳೆದ 15 ದಿನಗಳಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ದಿನದಿನಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಕೆಲವು ವಾರ್ಡ್ ಗಳಿಗೆ ಏಳೆಂಟು ದಿನಕ್ಕೊಮ್ಮೆ ನೀರು ಪೂರೈಸಿದರೆ, ಮತ್ತೆ ಕೆಲ ವಾರ್ಡ್‌ಗಳಿಗೆ 10-11 ದಿನಗಳಾದರೂ ಕುಡಿಯುವ ನೀರು ಪೂರೈಸಿಲ್ಲ. ಇದರಿಂದ ಎಲ್ಲಾ ಕುಟುಂಬಗಳಿಗೂ ತೊಂದರೆಯಾಗುತ್ತಿದೆ ಎಂದರು.

ತಾಲೂಕಿನ ಬಾತಿ ಗ್ರಾಮದ ಪಂಪ್‌ಹೌಸ್‌ಗೆ ನಿರಂತರ ವಿದ್ಯುತ್‌ ಪೂರೈಕೆಯಾಗದ ಕಾರಣ ದಿನದಿನಕ್ಕೂ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದಿನವೊಂದಕ್ಕೆ ಹಲವು ಬಾರಿ ವಿದ್ಯುತ್‌ ಕಡಿತವಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು, ನಿರಂತರವಾಗಿ ಪಂಪ್‌ ಹೌಸ್‌ಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದರಿಂದ ಪಾಲಿಕೆಯಿಂದ ಸಮರ್ಪಕ ನೀರು ಪೂರೈಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಈ ಹಿಂದೆ ಕಾರ್ಯಾದೇಶ ನೀಡಿದ್ದು, ಹರಿಹರದ ವಿದ್ಯಾನಗರದ ಸಬ್ ಸ್ಟೇಷನ್‌ನಿಂದ ಬಾತಿ ಗ್ರಾಮದ ಪಂಪ್ ಹೌಸ್‌ವರೆಗೆ ಹಾಗೂ ಕೋಡಿಯಾಲ ಹೊಸಪೇಟೆಯಿಂದ ಹರಿಹರ ತಾ. ರಾಜನಹಳ್ಳಿ ಪಂಪ್‌ಹೌಸ್‌ವರೆಗೆ ಎಕ್ಸಪ್ರೆಸ್‌ ವಿದ್ಯುತ್ ಮಾರ್ಗದ ಫೀಡರ್ ಅಳವಡಿಸುವ ಕಾಮಗಾರಿಯನ್ನೇ ನಿಲ್ಲಿಸಲಾಗಿದೆ. ಈ ಸಮಸ್ಯೆಯನ್ನೂ ಜಿಲ್ಲಾಧಿಕಾರಿಗಳು ಪ್ರಥಮಾದ್ಯತೆ ಮೇಲೆ ಪರಿಹರಿಸಿ, ಸಮರ್ಪಕ ನೀರೊದಗಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಸೋಗಿ ಶಾಂತಕುಮಾರ, ಆರ್.ಶಿವಾನಂದ, ಆರ್.ಎಲ್‌.ಶಿವಪ್ರಕಾಶ, ಮುಖಂಡರಾದ ಜಯಪ್ರಕಾಶ, ಶ್ರೀನಿವಾಸ, ಎಸ್.ಟಿ.ಯೋಗೇಶ್ವರ, ಸಂತೋಷ ಜಾಧವ್, ವಿನಯ್ ದಿಳ್ಯಪ್ಪ ಇತರರಿದ್ದರು.