ಎತ್ತಿನಹೊಳೆಯಿಂದ ಕಾಲುವೆಗೆ ನೀರು

| Published : Dec 02 2023, 12:45 AM IST

ಸಾರಾಂಶ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಕಾಲುವೆಗೆ ನೀರು ಹರಿಸುವ ಪ್ರಾಯೋಗಿಕ ಕಾರ್ಯ ಆರಂಭವಾಗಿದೆ. ಪ್ರಮುಖ ನಾಲೆಯ ಕೆಲವೆಡೆ ನೀರು ಸೋರಿಕೆ ಆಗಿರುವುದನ್ನು ಬಿಟ್ಟರೆ ನೀರಿನ ಹರಿವು ಬಹುತೇಕ ಯಶಸ್ಸಿನತ್ತ ಸಾಗಿದೆ. ಸಚಿವರ ಗಡುವಿನಂತೆ ಪೈಪ್‌ಲೈನ್‌ಗಳ ಮೂಲಕ ನೀರು ಹರಿಸುವ ಕಾರ್ಯಕ್ಕೆ ಅಧಿಕಾರಿಗಳು ನವೆಂಬರ್‌ ಅಂತ್ಯದಲ್ಲಿ ಚಾಲನೆ ನೀಡಿದ್ದು ದಿನವೊಂದಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ೩ರಿಂದ ನಾಲ್ಕು ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಹರಿಸುವ ಮೂಲಕ ತಪಾಸಣೆ ನಡೆಸಲಾಗುತ್ತಿದ್ದು ತಪಾಸಣೆ ಬಹುತೇಕ ಯಶಸ್ವಿಯಾಗಿ ನಡೆದಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಕಾಲುವೆಗೆ ನೀರು ಹರಿಸುವ ಪ್ರಾಯೋಗಿಕ ಕಾರ್ಯ ಆರಂಭವಾಗಿದೆ. ಪ್ರಮುಖ ನಾಲೆಯ ಕೆಲವೆಡೆ ನೀರು ಸೋರಿಕೆ ಆಗಿರುವುದನ್ನು ಬಿಟ್ಟರೆ ನೀರಿನ ಹರಿವು ಬಹುತೇಕ ಯಶಸ್ಸಿನತ್ತ ಸಾಗಿದೆ.

ಆಗಸ್ಟ್ ತಿಂಗಳ ಅಂತ್ಯದಲ್ಲಿ ತಾಲೂಕಿಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ಬೃಹತ್ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಾಯೋಗಿಕ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ನೂರು ದಿನಗಳ ಗಡುವು ನೀಡಿದ್ದರು. ಸಚಿವರ ಗಡುವಿನಂತೆ ಪೈಪ್‌ಲೈನ್‌ಗಳ ಮೂಲಕ ನೀರು ಹರಿಸುವ ಕಾರ್ಯಕ್ಕೆ ಅಧಿಕಾರಿಗಳು ನವೆಂಬರ್‌ ಅಂತ್ಯದಲ್ಲಿ ಚಾಲನೆ ನೀಡಿದ್ದು ದಿನವೊಂದಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ೩ರಿಂದ ನಾಲ್ಕು ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಹರಿಸುವ ಮೂಲಕ ತಪಾಸಣೆ ನಡೆಸಲಾಗುತ್ತಿದ್ದು ತಪಾಸಣೆ ಬಹುತೇಕ ಯಶಸ್ವಿಯಾಗಿ ನಡೆದಿದೆ.

ಮೊದಲಹಂತ: ತಪಾಸಣೆಯ ಮೊದಲ ಹಂತವಾಗಿ ಕಾಡುಮನೆ ಗ್ರಾಮದಲ್ಲಿರುವ ವಿಆರ್(ಅಣೆಕಟ್ಟೆ)೪,೫ರ ಒಂದೊಂದು ಮೋಟರ್‌ಗಳಿಂದ ನೀರೆತ್ತುವ ಪ್ರಾಯೋಗಿಕ ತಪಾಸಣೆ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದು ನ. ೨೨ರಂದು ನಡೆಸಿದ ಮೊದಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದ್ದು ವಿ.ಆರ್ ೫ ರಿಂದ ೭.೧ ಕಿ.ಮಿ ದೂರದಲ್ಲಿರುವ ಡೆಲಿವರಿ ಛೇಂಬರ್‌ರ ೨ವರೆಗೆ ಮೊದಲ ದಿನವೇ ಯಶಸ್ವಿಯಾಗಿ ನೀರು ಹರಿಸಲಾಗಿದೆ.

ಗುರುತ್ವಾಕರ್ಷಣೆಯ ಮೂಲಕ ನೀರು: ಡೆಲಿವರಿ ಛೇಂಬರ್ ೨ರಿಂದ ದೊಡ್ಡನಗರದಲ್ಲಿನ ಡೆಲಿವರಿ ಛೇಂಬರ್ ೩ರವಗಿನ ೧೪.೯ ಕಿ.ಮೀ. ದೂರ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಯಲಿದ್ದು ಇದಕ್ಕಾಗಿ ನವಂಬರ್ ೨೩ರಂದು ಡೆಲಿವರಿ ಛೇಂಬರ್ ಎರಡರಿಂದ ಹಾರ್ಲೇ ಎಸ್ಟೇಟ್ ವರೆಗಿನ ಐದು ಕಿ.ಮೀ. ದೂರ ನೀರು ಹರಿಸಲಾಗಿದ್ದು ಈ ಐದು ಕಿ.ಮೀ.ನ ಅಂತರದ ದೇಖ್ಲ ಹಾಗೂ ಮಲ್ಲೆಗದ್ದೆ ಗ್ರಾಮ ಸಮೀಪದ ಎರಡು ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಮ್ಯಾನ್ ಹೋಲ್ ಹಾಗೂ ಸ್ಕ್ರೂವಾಲ್ ಅಧಿಕ ಗಾಳಿ ಹಾಗೂ ನೀರಿನ ಒತ್ತಡದಿಂದ ತೆರೆದುಕೊಂಡು ನೀರು ಹೊರಚೆಲ್ಲಿ ಅದ್ವಾನ ಸೃಷ್ಟಿಸಿದೆ. ಮರುದಿನವೇ ತಗ್ಗುಪ್ರದೇಶದಲ್ಲಿರುವ ಸ್ಕ್ರೂವಾಲ್ ತೆರೆದು ಪೈಪ್‌ಲೈನ್‌ನಲ್ಲಿ ಸಂಗ್ರಹವಾಗಿದ್ದ ನೀರು ಹೊರಹಾಕಿ ನೀರು ಸೋರಿಕೆ ಪ್ರದೇಶವನ್ನು ಮತ್ತೆ ಮುಚ್ಚಿ ನೀರು ಹರಿಸಲಾಗಿದ್ದು ಯಶಸ್ವಿಯಾಗಿ ಪೂರ್ಣಗೊಂಡಿದೆ.

ಹೇಮಾವತಿ ನದಿಗೆ ಎತ್ತಿನಹೊಳೆ ನೀರು: ಡಿಸೆಂಬರ್ ಮೊದಲ ದಿನ ದೇಖ್ಲಾ ಗ್ರಾಮದಿಂದ ಹೇಮಾವತಿ ಸೇತುವೆವರೆಗಿನ ೯.೯ ಕಿ.ಮಿ ನೀರು ಹರಿಸಲಾಗಿದ್ದು ಈ ವೇಳೆ ಮೂಡಿಗೆರೆ ರಸ್ತೆ ಹಾದು ಹೋಗುವ ಪ್ರದೇಶದಲ್ಲಿ ಮತ್ತೆ ಸ್ಕ್ರೂವಾಲ್ ತೆರೆದು ಅಧಿಕ ನೀರು ಹೊರಹೋಗಿದ್ದು ಅಲ್ಲಿಯೂ ಸ್ಕ್ರೂ ವಾಲ್ ಹಾಗೂ ಮ್ಯಾನ್‌ಹೋಲ್‌ಗಳನ್ನು ಶಾಶ್ವತವಾಗಿ ಮುಚ್ಚುವ ಮೂಲಕ ಯಶಸ್ವಿಯಾಗಿ ನೀರು ಹರಿಸಿ ಹೇಮಾವತಿ ನದಿಗೆ ಬಿಡಲಾಗಿದೆ.

ರೈಲ್ವೆ ಅಡ್ಡಿ: ಸದ್ಯ ಎತ್ತಿನಹೊಳೆ ಯೋಜನೆಗಾಗಿ ತಾಲೂಕಿನಲ್ಲಿ ೮ ವಿಆರ್‌ಗಳ ನಿರ್ಮಾಣ ಮಾಡಲಾಗಿದ್ದು ಇನ್ನುಳಿದ ಆರು ವಿಆರ್‌ಗಳಿಂದ ನೀರೆತ್ತುವ ಪ್ರಯೋಗ ನಡೆಸಲು ವಿದ್ಯುತ್ ಸಂಪರ್ಕ ಅಗತ್ಯವಿದೆ. ಬಹುತೇಕ ವಿದ್ಯುತ್ ಲೈನ್ ಕೆಲಸ ಮುಕ್ತಾಯಗೊಂಡಿದೆ. ಆದರೆ, ಕಪ್ಪಳ್ಳಿ ಗ್ರಾಮ ಸಮೀಪ ಇರುವ ವಿಆರ್ ೧ ಬಳಿ ಇರುವ ರೈಲ್ವೆ ಹಳಿದಾಟಿ ವಿದ್ಯುತ್ ಸಂಪರ್ಕ ಕಲ್ಪಿಸಲು ರೈಲ್ವೆ ಇಲಾಖೆಯ ಅನುಮತಿ ಬೇಕಾಗಿದೆ. ಈಗಾಗಲೇ ಅನುಮತಿ ಕೋರಿ ಪತ್ರ ಬರೆದು ತಿಂಗಳು ಕಳೆದರು ಅನುಮತಿ ದೊರೆಯದ ಕಾರಣ ಬಾಕಿ ಉಳಿದಿರುವ ಆರು ವಿಆರ್‌ಗಳಿಗೆ ವಿದ್ಯುತ್ ಸಂಪರ್ಕ ದೊರೆಯದಾಗಿದೆ. ಆದ್ದರಿಂದ ಬಾಕಿ ಉಳಿದಿರುವ ವಿಆರ್‌ಗಳಿಂದ ನೀರು ಮೇಲೆತ್ತುವ ಪ್ರಾಯೋಗಿಕ ಪರೀಕ್ಷೆ ಅನಿರ್ದಿಷ್ಟಾವಧಿವರೆಗೆ ಮುಂದೂಡಲ್ಪಟ್ಟಿದೆ.

೧೮ಕ್ಕೆ ಗಡುವು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಡಿಸೆಂಬರ್ ತಿಂಗಳ ೧೮ಕ್ಕೆ ಎಲ್ಲ ವಿಆರ್‌ಗಳಿಂದ ಪ್ರಾಯೋಗಿಕವಾಗಿ ನೀರು ಹರಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಪ್ರತಿಯೊಂದು ಮಾರ್ಗದ ಪರೀಕ್ಷೆಗಾಗಿ ಕನಿಷ್ಠ ೧೫ ದಿನಗಳ ಅಗತ್ಯ ಇರುವುದರಿಂದ ಸಚಿವರ ನೀಡಿರುವ ಗಡುವಿನೊಳಗೆ ಎಲ್ಲ ವಿಯರ್‌ಗಳ ಪ್ರಾಯೋಗಿಕ ಪರೀಕ್ಷೆ ಅಸಾಧ್ಯವಾಗಿದೆ. ಆದರೆ, ಬಹುತೇಕ ಮುಂದಿನ ಮಳೆಗಾಲದಲ್ಲಿ ಬರಪೀಡಿತ ಜಿಲ್ಲೆಗಳ ಜನರು ಎತ್ತಿನಹೊಳೆ ನೀರಿನ ನಿರೀಕ್ಷೆಯಲ್ಲಿರಬಹುದಾಗಿದೆ.