ಸಾರಾಂಶ
ಹಳಿಯಾಳ: ನೀರಾವರಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದಲ್ಲಿ ಅತಿಯಾದ ವಿಳಂಬವಾಗಿದೆ. ಕಾಮಗಾರಿ ಬಗ್ಗೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ನೀಡುವ ಉತ್ತರ ಗಮನಿಸಿದರೆ ಸಮನ್ವಯದ ಕೊರತೆಯಿದೆ. ಹೀಗಾದರೆ ಜನಪರ ಯೋಜನೆಗಳು ಮುಕ್ತಾಯಗೊಳ್ಳುವುದು ಯಾವಾಗ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅಸಮಾಧಾನ ಹೊರಹಾಕಿದರು.
ಸೋಮವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಹಳಿಯಾಳ, ಜೋಯಿಡಾ ತಾಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಾಳಿನದಿ ನೀರಾವರಿ ಯೋಜನೆ ಮತ್ತು ಹಳಿಯಾಳ ಮತ್ತು ದಾಂಡೇಲಿ ನಗರದಲ್ಲಿ ಅಮೃತ 2.0 ಅಡಿಯಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಅಧಿಕಾರಿಗಳು ನೀಡುವ ಉತ್ತರ ಕೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ಈ ಯೋಜನೆಗಳ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯನ್ನು ಹಲವಾರು ಬಾರಿ ನಡೆಸಿದ್ದೇನೆ. ಪ್ರತಿ ಬಾರಿಯೂ ಅಧಿಕಾರಿಗಳು ಅದೇ ಉತ್ತರ, ಸಮಾಜಾಯಿಷಿ ನೀಡುತ್ತಿದ್ದಾರೆ ಹೊರತು ಕಾಮಗಾರಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜನಪರ ಯೋಜನೆಗಳು ಘೋಷಿತ ಅವಧಿಯಲ್ಲೇ ಆಗಬೇಕು. ಆಗ ಮಾತ್ರ ಆ ಯೋಜನೆಗಳಿಗೆ ಮಹತ್ವ ಇರುತ್ತದೆ. ಹೀಗಿರುವಾಗ ಯೋಜನೆ ಕಾರ್ಯಗತವಾಗುವುದನ್ನು ಜನ ಕಾದು ಬೇಸತ್ತು ಹೋದ ನಂತರ ಯೋಜನೆ ಆರಂಭಗೊಂಡರೆ ಅದಕ್ಕೆ ಪ್ರಯೋಜನವೇನು? ನಿಮ್ಮ ಆಡಳಿತ ವೈಖರಿಯಿಂದ ಸರ್ಕಾರಕ್ಕೂ, ನನಗೂ ಕೆಟ್ಟ ಹೆಸರು ಬರುತ್ತದೆ ಎಂದರು.ಸಮಸ್ಯೆ ಪ್ರಗತಿ ಹೇಳಿ: ನಾನು ಸಭೆ ಕರೆದಾಗ ಮಾತ್ರ ನೀವು ಸಮಸ್ಯೆ ಹೇಳಿದರೆ ಪ್ರಯೋಜನವೇನು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ದೇಶಪಾಂಡೆ, ಕಾಮಗಾರಿಗೆ ಯಾವ ತಾಂತ್ರಿಕ ಆಡಚಣೆಗಳು ಎದುರಾಗಿವೆ? ಪರವಾನಗಿ ಪ್ರಕ್ರಿಯೆ ಯಾವ ಹಂತಕ್ಕೆ ಬಂದು ತಲುಪಿದೆ? ಇದನ್ನು ನನ್ನ ಗಮನಕ್ಕೆ ತರುವುದನ್ನು ಬಿಟ್ಟು, ನಿಮ್ಮಷ್ಟಕ್ಕೆ ಮುಕ್ತಾಯಗೊಳ್ಳುವುದು ಯಾವಾಗ? ಸಮಸ್ಯೆಗಳನ್ನು ಯಾವ ಅಧಿಕಾರಿಗಳು ಬಾಯ್ಬಿಟ್ಟು ಹೇಳುತ್ತಿಲ್ಲ. ಇನ್ಮುಂದೆ ಕಡ್ಡಾಯವಾಗಿ ಕಾಮಗಾರಿ ಪ್ರಗತಿ ವರದಿಯನ್ನು, ಎದುರಾಗುವ ತೊಂದರೆ, ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಬೇಕು. ನೀರಾವರಿ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕಾಮಗಾರಿಗೆ ಸಹಕಾರ ನೀಡಬೇಕೆಂದು ಕೋರಿದರು.
ಮಾರ್ಚ್‌ನಲ್ಲಿ ಮುಕ್ತಾಯ: ಹಳಿಯಾಳ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕೆಲಸ ಅಂತಿಮ ಹಂತಕ್ಕೆ ತಲುಪಿದ್ದು, ಮಾರ್ಚ್ ಅಂತ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಮೊದಲ ಹಂತದಲ್ಲಿ 70 ಗ್ರಾಮಗಳಿಗೆ ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡಿ ಪರಿಶೀಲಿಸಲಾಗುವುದೆಂದು ಯೋಜನೆಯ ಅಧಿಕಾರಿ, ಹಳಿಯಾಳ ತಾಪಂ ಪ್ರಭಾರಿ ಇಒ ಸತೀಶ್ ಆರ್. ಭರವಸೆ ನೀಡಿದರು.ಕಾಳಿನದಿ ನೀರಾವರಿ ಯೋಜನೆ ಮಾರ್ಚ್ ಅಂತ್ಯದಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಕೆಎನ್ಎನ್‌ಎಲ್ ಅಧಿಕಾರಿಗಳು ತಿಳಿಸಿದರು. ದಾಂಡೇಲಿ ಮತ್ತು ಹಳಿಯಾಳ ಪಟ್ಟಣದ ಅಮೃತ 2.0 ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದು ಯೋಜನೆಯ ನಿರ್ವಹಣೆಯನ್ನು ವಹಿಸಿರುವ ಇಲಾಖಾ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಹಳಿಯಾಳ, ದಾಂಡೇಲಿ ತಾಲೂಕು ತಹಸೀಲ್ದಾರರು, ತಾಪಂ ಇಒ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳು ಇದ್ದರು.