ಸಾರಾಂಶ
ಚಾಮರಾಜನಗರದ ಸ್ವಚ್ಛತೆ ಹಾಗೂ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ವಿಲೇವಾರಿ ಮಾಡುವ ನೂತನ 5 ಆಟೋ ಟಿಪ್ಪರ್‌ಗಳಿಗೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸ್ವಚ್ಛತೆ ಹಾಗೂ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ವಿಲೇವಾರಿ ಮಾಡುವ ನೂತನ 5 ಆಟೋ ಟಿಪ್ಪರ್‌ಗಳಿಗೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಚಾಲನೆ ನೀಡಿದರು.ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಸ್ವಚ್ಚಭಾರತ ಅಭಿಯಾನ ೧.೦ ಯೋಜನೆಯಡಿ ಚಾಮರಾಜನಗರ ನಗರಸಭೆ ವತಿಯಿಂದ ೪೬.೫೦ ಲಕ್ಷ ರು.ವೆಚ್ಚದಲ್ಲಿ ಖರೀದಿಸಲಾಗಿರುವ ೩.೦ ಕ್ಯೂಬಿಕ್ ಸಾಮರ್ಥ್ಯದ 5 ಆಟೋ ಟಿಪ್ಪರ್‌ಗಳನ್ನು ಸೇವೆಗೆ ಸಮರ್ಪಿಸಿ ಶುಭ ಹಾರೈಸಿದರು. ಇದೇ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಗರದ ಸ್ವಚ್ಛತೆಗೆ ನಾಗರಿಕರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿಕಸ ಹಾಗೂ ಒಣಕಸವಾಗಿ ವಿಂಗಡಿಸಿ ಕಸ ಸಂಗ್ರಹಣೆಗೆ ಬರುವ ನಗರಸಭೆಯ ಸ್ವಚ್ಛತಾ ಸಿಬ್ಬಂದಿಗೆ ನೀಡಬೇಕು. ನಗರದ ನೈರ್ಮಲ್ಯಕ್ಕಾಗಿ ಎಲ್ಲರು ಸಹಕರಿಸಬೇಕು ಎಂದರು.
ನಗರಸಭೆಯ ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡುವ ಸಲುವಾಗಿ ಕಸ ಸಂಗ್ರಹಣೆ ವಾಹನಗಳಿಗೆ ಇಂದು ಚಾಲನೆ ಸಿಕ್ಕಿದೆ. ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ನಗರಸಭೆ ಸಿಬ್ಬಂದಿಗೆ ನೀಡಬೇಕು. ಕಸವನ್ನು ಹಸಿಕಸ ಹಾಗೂ ಒಣಕಸವಾಗಿ ಬೇರ್ಪಡಿಸುವುದರಿಂದ ಘನತ್ಯಾಜ್ಯ ವಿಂಗಡಣೆ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಜನರು ನಗರಸಭೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಉಪಾಧ್ಯಕ್ಷೆ ಮಮತ, ಸದಸ್ಯರಾದ ಮಹೇಶ್, ಕುಮುದ, ಖಲೀಲ್ ಉಲ್ಲಾ, ತೌಸಿಯಾ ಬಾನು, ಶಿವರಾಜು, ಪೌರಾಯುಕ್ತ ಎಸ್.ವಿ. ರಾಮದಾಸ್, ಪರಿಸರ ಅಭಿಯಂತರ ರೂಪ ಇತರರು ಇದ್ದರು.