ಸಾರಾಂಶ
ಗುಳೇದಗುಡ್ಡ ಬಸ್ ಡಿಪೋದಲ್ಲಿ ತುಂಬಾ ಹಳೆಯ ಬಸ್‌ಗಳಿದ್ದು, ಅವುಗಳನ್ನೇ ಬಾಗಲಕೋಟೆ ಮಾರ್ಗಕ್ಕೆ ಓಡಿಸುತ್ತಿದೆ. ಇಂತಹ ಬಸ್ ಗಳಿಂದ ಮೇಲಿಂದ ಮೇಲೆ ತೊಂದರೆಗಳು ಆಗುತ್ತಿವೆ.
ಗುಳೇದಗುಡ್ಡ : ಗುಳೇದಗುಡ್ಡ ಬಸ್ ಡಿಪೋದಲ್ಲಿ ತುಂಬಾ ಹಳೆಯ ಬಸ್‌ಗಳಿದ್ದು, ಅವುಗಳನ್ನೇ ಬಾಗಲಕೋಟೆ ಮಾರ್ಗಕ್ಕೆ ಓಡಿಸುತ್ತಿದೆ. ಇಂತಹ ಬಸ್ ಗಳಿಂದ ಮೇಲಿಂದ ಮೇಲೆ ತೊಂದರೆಗಳು ಆಗುತ್ತಿವೆ. ಅವುಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ನೀಡಬೇಕೆಂದು ಇಲ್ಲಿನ ಕರವೇ ಕಾರ್ಯಕರ್ತರು, ಸಾರ್ವಜನಿಕರು ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ನಿಯಂತ್ರಣಾಧಿಕಾರಿಗಳಿಗೆ ಬರೆದ ಮನವಿ ಗುರುವಾರ ಘಟಕದ ವ್ಯವಸ್ಥಾಪಕರಿಗೆ ನೀಡಿ ಆಗ್ರಹಿಸಿದರು.
ಗುಳೇದಗುಡ್ಡ ಪಟ್ಟಣದಿಂದ ಬಾಗಲಕೋಟೆಗೆ ದಿನಾಲೂ ನೂರಾರು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಬಸ್‌ಗಳನ್ನೇ ಅವಲಂಬಿಸಿ ಹೋಗಿ ಬರುತ್ತಾರೆ. ಈ ಬಸ್‌ಗಳು ಬಹಳ ಹಳೆಯದಾಗಿರುವುದರಿಂದ ಆಗಾಗ ದಾರಿಯ ಮಧ್ಯದಲ್ಲಿ ಕೆಟ್ಟು ನಿಲ್ಲುವುದು ಸ್ವಾಭಾವಿಕವಾಗಿದೆ. ಇದರಿಂದ ಸಾಕಷ್ಟು ತೊಂದರೆಗಳಾಗುತ್ತಿವೆ. ಮೊನ್ನೆ ಬಾಗಲಕೋಟೆ ಮಾರ್ಗ ಮಧ್ಯದ ಬೂದಿನಗಡ ಗ್ರಾಮದ ಹತ್ತಿರ ಬಸ್ ಗಾಲಿಯ ನಟ್ ಬೋಲ್ಟ್‌ಗಳು ಕಳಚಿಬಿದ್ದು ಆಗಬಹುದಾದ ಅನಾಹುತ ಪ್ರಯಾಣಿಕರ ಹಾಗೂ ಚಾಲಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ಇಂತಹ ಅನಾಹುತಗಳು ಮೇಲಿಂದ ಮೇಲೆ ಆಗುತ್ತಿವೆ. ಏನಾದರೂ ಪ್ರಾಣಾಪಾಯವಾದರೆ ಹೊಣೆಯಾರು? ಹಳೆಯದಾದ ಗುಜರಿಗೆ ಹಾಕುವ ಬಸ್‌ಗಳನ್ನು ಹಿಂದಕ್ಕೆ ಪಡೆದು ಹೊಸ ಬಸ್‌ಗಳನ್ನು ಪೂರೈಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಹೊಸ ಬಸ್ ಓಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿ ಮನವಿಯನ್ನು ಘಟಕದ ವ್ಯವಸ್ಥಾಪಕಿ ವಿದ್ಯಾ ನಾಯಕ ಅವರಿಗೆ ನೀಡಿದರು. ಮನವಿ ಪಡೆದುಕೊಂಡು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಅಂಗಡಿ ಮನವಿ ಓದಿದರು. ಅಶೋಕ ಹೆಗಡೆ, ಪ್ರಕಾಶ ವಾಳದುಂಕಿ, ಭುವನೇಶ ಪೂಜಾರ, ಬೆಣ್ಣಿ ಮಲ್ಲೇಶ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ ದೋಂಗಡೆ, ಶ್ರೀಶೈಲ ಕುಂಬಾರ, ಸಿದ್ದರಾಮಯ್ಯ ಪುರಣಿಕಮಠ, ಸಂತೋಷ ತಿಪ್ಪಾ, ವಿಜಯಕುಮಾರ ಕವಿಶೆಟ್ಟಿ, ಸೋಮು ಕಲಬುರ್ಗಿ ಸೇರಿದಂತೆ ಇತರರು ಇದ್ದರು.