ಗ್ರಾಮಸಭೆಗೆ ಅಧಿಕಾರಿಗಳ ಗೈರು

| Published : Sep 13 2024, 01:38 AM IST

ಸಾರಾಂಶ

ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಆವರಣದಲ್ಲಿ ಅಧ್ಯಕ್ಷ ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ೨೦೨೪-೨೫ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ನಡೆಯಿತು.

ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಆವರಣದಲ್ಲಿ ಅಧ್ಯಕ್ಷ ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ೨೦೨೪-೨೫ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ನಡೆಯಿತು. ಗ್ರಾಪಂ ವ್ಯಾಪ್ತಿಯಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರದಿದ್ದರೆ ಸಮಸ್ಯೆಗಳನ್ನು ಹೇಳಿಕೊಳ್ಳುವುದಾದರೂ ಯಾರ ಬಳಿ ಎಂದು ಗ್ರಾಮಸ್ಥರು, ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂಗಳಿಂದ ಕಳುಹಿಸುವ ಕ್ರಿಯಾ ಯೋಜನೆಗಳು ಅನುಮೋದನೆಯಾಗಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ೨ ವರ್ಷಗಳಾದರೂ ಪೂರ್ಣಗೊಂಡಿಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳಿವೆ. ಸರ್ಕಾರಿ ಇಲಾಖಾ ಅಧಿಕಾರಿಗಳೇ ಬಂದಿಲ್ಲವೆಂದರೆ ನಾವು ಯಾರ ಬಳಿ ಸಮಸ್ಯೆ ಹೇಳಬೇಕು ಎಂದು ಹೋಬಳಿ ಜೆಡಿಎಸ್‌ ಅಧ್ಯಕ್ಷ ಕೃಷ್ಣಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು ನಿರ್ಮಿಸಲು ೩ ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿದ್ದೇವೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಶಾಂಭವಿ ಹೇಳುತ್ತಿದ್ದಂತೆ ಕೆರಳಿದ ಮುಖಂಡರು, ಕ್ರಿಯಾ ಯೋಜನೆ ಅನುಮೋದನೆಯಾಗಿದ್ದರೆ ಸಾರ್ವಜನಿಕರಿಗೆ ಮಾಹಿತಿ ಕೊಡಿ, ಸುಳ್ಳು ಹೇಳಿ ದಿಕ್ಕು ತಪ್ಪಿಸಬೇಡಿ, ಗುದ್ದಲಿಪೂಜೆ ಮಾಡಿರುವ ಸಾಕಷ್ಟು ಕಾಮಗಾರಿಗಳು ಅನುದಾನವಿಲ್ಲದೆ ಸ್ಥಗಿತಗೊಂಡಿವೆ ಎಂದರು.

ನರೇಗಾ ಯೋಜನೆಯಡಿ ಕೋಟ್ಯಂತರ ರು.ವೆಚ್ಚದಲ್ಲಿ ಅಭಿವೃದ್ಧಿ ಮಾಡಿಕೊಳ್ಳಬಹುದು. ಆದರೆ, ಜನರೇ ಆಸಕ್ತಿ ತೋರಿಸುತ್ತಿಲ್ಲ ಎಂದು ಪಿಡಿಒ ಮಂಜುನಾಥ್ ಹೇಳಿದರು.

ಗ್ರಾಪಂ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿ, ಯಾವ ಯಾವ ಇಲಾಖೆ ಅಧಿಕಾರಿಗಳು ಬಂದಿಲ್ಲವೋ ಅವರ ವಿರುದ್ಧ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ದೂರು ನೀಡಲಾಗುತ್ತದೆ. ಸಾರ್ವಜನಿಕರು ಗ್ರಾಮಸಭೆಯಲ್ಲಿ ಕೊಟ್ಟಿರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ಆನಂದಮ್ಮ, ಮುರಳಿಮೋಹನ್, ಹರೀಶ, ರತ್ನಮ್ಮ, ಮುರಳೀಧರ, ಪದ್ಮಮ್ಮ, ಸಿ.ಕೋಮಲ, ಜಯಮ್ಮ, ಎನ್.ಕೃಷ್ಣಮೂರ್ತಿ, ಕೆ.ಲಾವಣ್ಯ, ಸುರೇಶ್, ಮುನಿಲಕ್ಷಮಮ್ಮ, ಮುನಿಯಪ್ಪ, ಎ.ರಂಜಿತ, ಮಹೇಂದ್ರಬಾಬು, ಎಂ.ಮಂಜುಳಮ್ಮ, ಕೆ.ಗೀತಾ, ಎನ್.ರಾಜಣ್ಣ, ಮುಖಂಡರಾದ ನಾರಾಯಣಸ್ವಾಮಪ್ಪ, ಕಲ್ಯಾಣ್ ಕುಮಾರ್ ಬಾಬು ಇತರರಿದ್ದರು.

ವಿಜೆಪಿ ೧೨

ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿ ಗ್ರಾಪಂನಲ್ಲಿ ನಡೆದ ಮೊದಲ ಹಂತದ ಗ್ರಾಮಸಭೆಯಲ್ಲಿ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿದರು.