ಆರೋಗ್ಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ

| Published : Sep 13 2024, 01:38 AM IST

ಸಾರಾಂಶ

ಆಶಾ ಕಾರ್ಯಕರ್ತೆಯರು ತಂಡ ರಚಿಸಿ ಗ್ರಾಮದ ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಎಲ್ಲಾ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಿ, ಜನತೆಯ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸೂಚಿಸಿದರು.

ಸಾಲಿಗ್ರಾಮ ತಾಲೂಕಿನ ಶೀಗೆವಾಳು ಗ್ರಾಪಂ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ವಾಂತಿ- ಬೇದಿಯಿಂದಾಗಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ತಂಡ ರಚಿಸಿ ಗ್ರಾಮದ ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಬೇಕು. ಮಕ್ಕಳಿಂದ ವಯಸ್ಸಾದ ವೃದ್ಧರವರೆಗೂ ಆರೋಗ್ಯ ವಿಚಾರಣೆ ನಡೆಸಿ, ಮನೆಯ ಶುಚಿತ್ವ, ಶುದ್ದ ಕುಡಿಯುವ ನೀರು ಹಾಗೂ ಓ.ಆರ್.ಎಸ್. ಪುಡಿಯನ್ನು ಸೇವಿಸುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ವಾಂತಿ ಭೇದಿ ಕಂಡು ಬಂದ ಮಂದಿ ಆರೋಗ್ಯವಾಗಿದ್ದಾರೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ ಓರ್ವ ಮೃತಪಟ್ಟಿದ್ದಾರೆ ಎನ್ಲಲಾಗಿದೆ. ಆದರೆ ಇದಕ್ಕೆ ಅನಾರೋಗ್ಯ ಕಾರಣ ಎಎದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿನ ಚರಂಡಿ, ನೀರಿನ ಟ್ಯಾಂಕ್ ಮತ್ತು ಸ್ಥಾವರಗಳನ್ನು ಕೂಡಲೇ ಸ್ವಚ್ಛಗೊಳಿಸಿ. ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಹಾಗೂ ಆರೋಗ್ಯ ಕೇಂದ್ರದ ಬಗ್ಗೆ ನಿಗಾವಹಿಸುವಂತೆ ಪಿಡಿಒಗೆ ಸೂಚಿಸಿದರು.

ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುವ ಕೊಟ್ಟಿಗೆ, ಕೆರೆ, ನೀರುಗಾಲುವೆ, ಮನೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಂಡು ಗ್ರಾಮದ ಅಭಿವೃದ್ದಿಗೆ ಸಹಕರಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು.

ಬಳಿಕ ಅಂಗನವಾಡಿಗೆ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿಯ ಮೂಲಭೂತ ಸೌಲಭ್ಯದ ಬಗ್ಗೆ ಮಾಹಿತಿ ಪಡೆದು, ಅಡುಗೆ ಮನೆಗೆ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಅಡುಗೆ ಮನೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮಕ್ಕಳಿಗೆ ಅತ್ಯಂತ ಗುಣಮಟ್ಟದ ಪೌಷ್ಟಿಕಾಂಶ ಹೊಂದಿರುವ ಆಹಾರ ನೀಡಬೇಕು ಎಂದು ಅವರು ಸೂಚಿಸಿದರು.

ಈ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಟಿಎಚ್‌ಒ ಡಾ.ಡಿ. ನಟರಾಜ್, ತಹಸೀಲ್ದಾರ್ ನರಗುಂದ, ಇಒ ಕುಲ್ ದೀಪ್, ಪಿಡಿಒ ಶ್ರೀಧರ್, ಅಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.