ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಬೆಟ್ಟದಲ್ಲಿ ಆರಂಭಗೊಂಡ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ಭಾನುವಾರ ಸಂಜೆ ಚಾಲನೆ ನೀಡಿದರು. ಶಾಸಕ ನೇತೃತ್ವದಲ್ಲಿ ನಡೆಸಬೇಕಿದ್ದ ಜಾತ್ರೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೇ ಗೈರಾಗಿದ್ದರು.ಎತ್ತುಗಳಿಗೆ ಪೂಜೆಸಲ್ಲಿಸಿ ಬಳಿಕ ಜಾತ್ರೆಯ ಆವರಣದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಿ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಜಾತ್ರಾ ಮೈದಾನದಲ್ಲಿ ಆರೋಗ್ಯ, ಕೃಷಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ವಿದ್ಯುತ್, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಆಯೋಜನೆ ಮಾಡಿದ್ದರು. ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯ, ಯೋಜನೆಗಳ ಕುರಿತ ಮಾಹಿತಿ ಹಾಕಿದ್ದರು.ರಾಸುಗಳ ಸಂಖ್ಯೆ ಕಡಿಮೆ:
ಜಾತ್ರೆಯ ಆರಂಭದ ಮೊದಲ ದಿನವಾದ ಭಾನುವಾರ ಜಾತ್ರೆಯಲ್ಲಿ ರಾಸುಗಳು ಹಾಗೂ ಸಾರ್ವಜನಿಕರ ಸಂಖ್ಯೆಯೂ ಕಡಿಮೆ ಇತ್ತು. ಸೋಮವಾರದಿಂದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳ ಆಗಮಿಸುವ ನಿರೀಕ್ಷೆ ಇದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರು:
ಬೇಬಿ ಬೆಟ್ಟದ ಭಾರೀ ದನಗಳ ಜಾತ್ರಾ ಮಹೋತ್ಸವವು ಪ್ರತಿ ವರ್ಷವು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ನಡೆಯುತ್ತದೆ. ಆದರೆ, ಜಾತ್ರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರ ಗೈರು ಹಾಜರಿಯಲ್ಲಿ ಜಾತ್ರೆಗೆ ಚಾಲನೆ ನೀಡಲಾಯಿತು.ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರೇ ಆಗಮಿಸುವ ಜಾತ್ರೆಯ ನೇತೃತ್ವವಹಿಸಿ ಮುನ್ನಡೆಸಬೇಕಿದ್ದ ರೈತರ ಪ್ರತಿನಿಧಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಜಾತ್ರೆಯಲ್ಲಿ ಭಾಗವಹಿಸಿದೆ ಅಮೆರಿಕಕ್ಕೆ ತೆರಳಿರುವುದಕ್ಕೆ ರೈತರು, ಹಾಗೂ ರೈತಸಂಘ ಕೆಲವು ಕಾರ್ಯಕರ್ತರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಯಿತು.
ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕಕ್ಕೆ ತೆರಳಿರುವುದರಿಂದ 9 ದಿನಗಳ ಕಾಲ ನಡೆಯುವ ಬೇಬಿಬೆಟ್ಟದ ಜಾತ್ರೆಗೆ ಸಂಪೂರ್ಣವಾಗಿ ಗೈರಾಗುವ ಸಾಧ್ಯತೆಗಳಿವೆ.ಶ್ರೀಶಿವಬಸವ ಸ್ವಾಮೀಜಿ ಮಾತನಾಡಿ, ರೈತರ ಜಾತ್ರೆ, ಬೇರೆ ಜಾತ್ರೆಗೆ ಹೋಲಿಸಿದರೆ ಹೆಚ್ಚು ಪ್ರಸಿದ್ಧಿ ಪಡೆದ ಜಾತ್ರೆ ಬೇಬಿಬೆಟ್ಟದ ಜಾತ್ರೆ. ರೈತರು ರಾಸುಗಳನ್ನು ಸಾಕಾಣಿಕೆ ಮಾಡುವುದು ಕಷ್ಟವಿದೆ. ರೈತರ ಬೆಳೆಗೆ ಸೂಕ್ತ ಬೆಲೆ ಇಲ್ಲ, ಮಳೆ ಇಲ್ಲದೆ ಸೂಕ್ತವಾದ ಬೆಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ರೈತರು, ಯೋಧರು ಎರಡು ಕಣ್ಣುಗಳಿದ್ದಂತೆ ಇಬ್ಬರನ್ನು ಗೌರವಿಸಬೇಕು. ಬೇಬಿಬೆಟ್ಟದ ಜಾತ್ರೆ ಭಕ್ತಿ ಮತ್ತು ಶ್ರದ್ಧೆಯ ಸಂಗಮವಾಗಿದೆ. ಮಹದೇಶ್ವರ ಸಿದ್ದೇಶ್ವರ ಸ್ಥಾನವಾಗಿದೆ, ಬಹಳ ಶ್ರದ್ಧೆ ಭಕ್ತಿಯಿಂದ ಭಗವಂತನ್ನು ಪ್ರಾರ್ಥಿಸಿ ಎಂದು ಸಲಹೆ ನೀಡುದರು.
ಜಾತ್ರೆ ನಡೆಯುವ ಸ್ಥಳವಾದ ಇದು 1623 ಎಕರೆ ಪ್ರದೇಶ ಮೈಸೂರು ಅರಸರಿಗೆ ಸೇರಿದ ಜಾಗವಾಗಿದೆ. ಇದು ಅರಸು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದ ಅಮೃತ ಮಹಲ್ ಕಾವಲು ಪ್ರದೇಶವಾಗಿದೆ. ಹಾಗಾಗಿ ನಾವೆಲ್ಲರು ಮೈಸೂರು ಅರಸರ ಮನೆತನವನ್ನು ಸ್ಮರಿಸಬೇಕು ಎಂದು ಮನವಿ ಮಾಡಿದರು.ರೈತನಾಯಕಿ ಸುನೀತ ಪುಟ್ಟಣ್ಣಯ್ಯ ಮಾತನಾಡಿ, ಬೇಬಿಬೆಟ್ಟದ ಜಾತ್ರೆ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಸಹಕರಿಸಿ, 30ಕ್ಕೂ ಅಧಿಕ ಸಾಮೂಹಿಕ ಸರಳ ವಿವಾಹ ಮಾಡಲಾಗುತ್ತದೆ. ಎಲ್ಲರೂ ಜತೆಗೂಡಿ ಒಗ್ಗಟ್ಟಿನಿಂದ ಜಾತ್ರೆ ಮುನ್ನಡೆಸಿಕೊಡಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ ಬಸವರೆಡ್ಡಪ್ಪರೋಣದ ಮಾತನಾಡಿ, ಹಲವು ದಶಕಗಳಿಂದ ನಿರಂತರವಾಗಿ ದನಗಳ ಜಾತ್ರೆ ನಡೆಯುತ್ತಿವೆ, ಸಾಕಷ್ಟು ರಾಸುಗಳು ಆಗಮಿಸುವ, ಶಾಸಕರು ಕಾರ್ಯಕ್ರಮದಲ್ಲಿ ಇಲ್ಲದೆ ಇದ್ದರೂ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ್ದಾರೆ. ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಸಹಕರಿಸಿ, ಇಲ್ಲವಾದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚಿಸಿದರು.ಇಒ ವೀಣಾ ಮಾತನಾಡಿ, ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಮುಕ್ತ ಜಾತ್ರಾ ಮಹೋತ್ಸವ ನಡಸಲಾಗುತ್ತಿದ್ದು, ಸಾರ್ವಜನಿಕರು, ರೈತರು, ಅಂಗಡಿಮುಂಗಟ್ಟು ಮಾಲೀಕರು ಪ್ಲಾಸ್ಟಿಕ್ ಮುಕ್ತ ಜಾತ್ರೆ ನಡೆಸಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಒ ವೀಣಾ, ಬಿಇಒ ಧರ್ಮಶೆಟ್ಟಿ, ಸಬ್ ಇನ್ಸ್ ಪೆಕ್ಟರ್ ಲಿಂಗರಾಜು, ರೈತ ಮುಖಂಡ ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ್, ರೈತಸಂಘದ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಚಿಕ್ಕಾಡೆ ಹರೀಶ್, ದಸಂಸ ಮುಖಂಡ ಅಂಕಯ್ಯ, ಸಿಡಿಪಿಒ ಪೂರ್ಣಿಮಾ ಸೇರಿದಂತೆ ಹಲವರು ಹಾಜರಿದ್ದರು.