ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಕೆಗೆ ಚಾಲನೆ

| Published : Dec 07 2024, 12:34 AM IST

ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಕೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಿದ್ದು, ಬಿಕ್ಕೋಡು ಆನೆ ಕ್ಯಾಂಪ್ ಬಳಿ ಬಂದಿರುವ ಸಾಕಾನೆಗಳಿಗೆ ಶಾಸಕ ಎಚ್ ಕೆ ಸುರೇಶ್ ಪೂಜೆ ಸಲ್ಲಿಸಿದರು. ಈ ತಿಂಗಳಿಂದ ನಡೆಯುವ ಅಧಿವೇಶನದಲ್ಲಿ ಇದರ ಬಗ್ಗೆ ಸದನದಲ್ಲಿ ಚರ್ಚಿಸುವುದರ ಜೊತೆಗೆ ಶಾಶ್ವತವಾಗಿ ನಮಗೆ ಪರಿಹಾರ ಸಿಗುವಂತೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಚಿವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಿದ್ದು, ಬಿಕ್ಕೋಡು ಆನೆ ಕ್ಯಾಂಪ್ ಬಳಿ ಬಂದಿರುವ ಸಾಕಾನೆಗಳಿಗೆ ಶಾಸಕ ಎಚ್ ಕೆ ಸುರೇಶ್ ಪೂಜೆ ಸಲ್ಲಿಸಿದರು.

ಮೈಸೂರು ದಸಾರದಲ್ಲಿ ಭಾಗಿಯಾಗಿದ್ದ ಸಾಕಾನೆ ಭೀಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸೇರಿದಂತೆ ಒಟ್ಟು ೬ ಕಾಡಾನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇವುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ಇಲ್ಲಿ ಬೀಡುಬಿಟ್ಟಿರುವ ಸುಮಾರು ೫೮ ಕಾಡಾನೆಗಳಿಗೆ ಇದೇ ತವರು ಮನೆಯಾಗಿದೆ. ಇವುಗಳಿಂದ ಬೇಸತ್ತಿರುವ ನಮ್ಮ ವಿಧಾನಸಭಾ ಕ್ಷೇತ್ರದ ಜನತೆ ಇವುಗಳನ್ನು ಇಲ್ಲಿಂದ ಶಾಶ್ವತವಾಗಿ ಸ್ಥಳಾಂತರ ಮಾಡಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿ ಆನೆಗಳು ತೊಂದರೆ ಕೊಡುವ ಆನೆಗಳ ಚಲನವಲನ ಅರಿಯಲು ರೇಡಿಯೊ ಕಾಲರ್ ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿಂದ ಶಾಶ್ವತವಾಗಿ ಅವುಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ನಮಗೆ ಭರವಸೆ ನೀಡಿದ್ದು, ಇಲ್ಲಿಂದ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರ ಮಾಡಿ ಕಾಡಿಗೆ ಅಟ್ಟುವಂತೆ ಭಗವಂತನಲ್ಲಿ ಮನವಿ ಮಾಡಿದ್ದೇವೆ. ಅದರಂತೆ ಈ ಭಾಗದಲ್ಲಿ ರೈತರು ಅತಿ ಹೆಚ್ಚು ಬೆಳೆ ನಷ್ಟ ಮಾಡಿಕೊಂಡಿರುವುದಲ್ಲದೆ ಪ್ರತಿನಿತ್ಯ ಭಯದಲ್ಲಿ ಇರುವ ಇವರಿಗೆ ಇದರಿಂದ ಶಾಶ್ವತ ಪರಿಹಾರ ಸಿಗುತ್ತದೆ. ಈ ತಿಂಗಳಿಂದ ನಡೆಯುವ ಅಧಿವೇಶನದಲ್ಲಿ ಇದರ ಬಗ್ಗೆ ಸದನದಲ್ಲಿ ಚರ್ಚಿಸುವುದರ ಜೊತೆಗೆ ಶಾಶ್ವತವಾಗಿ ನಮಗೆ ಪರಿಹಾರ ಸಿಗುವಂತೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಚಿವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಸಿಸಿಎಫ್‌ ರವಿಶಂಕರ್‌ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಅತಿ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು ಇವುಗಳಿಗೆ ರೇಡಿಯೊ ಕಾಲರ್‌ ಅಳವಡಿಸಲು ನಮಗೆ ಸೂಚನೆ ಸಿಕ್ಕಿದೆ.ಅತಿ ಹೆಚ್ಚು ಆನೆಗಳು ಉಪಟಳ ನೀಡುವ ಆನೆಗಳನ್ನು ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಇಲ್ಲಿಂದ ಇವುಗಳನ್ನು ಓಡಿಸುವ ಕೆಲಸ ಶುರುವಾಗಿದೆ. ಕಳೆದ ಬಾರಿ ಕಾರ್ಯಾಚರಣೆ ಸಂದರ್ಭದಲ್ಲಿ ೫ ಆನೆಗಳನ್ನು ಹಿಡಿಯಲಾಗಿತ್ತು. ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ಅವುಗಳನ್ನು ಹಿಡಿಯಲಾಗುತ್ತದೆ ಎಂದರು.

ತೀವ್ರ ಆಕ್ರೋಶ: ರೈತರ ಬೆಳೆಗಾರರ ಕಣ್ಣು ಒರೆಸುವ ಕೆಲಸ ಮಾಡದೆ ನಮಗೆ ಶಾಶ್ವತವಾಗಿ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಕೇವಲ ರೇಡಿಯೊ ಕಾಲರ್ ಅಳವಡಿಸಿದರೆ ನಮಗೆ ನ್ಯಾಯ ಸಿಗುವುದಿಲ್ಲ. ಕೂಡಲೇ ಇಲ್ಲಿರುವ ಎಲ್ಲಾ ಆನೆಗಳನ್ನು ಸ್ಥಳಾಂತರಿಸಿ ಬೆಳೆಗಾರರನ್ನು ಹಾಗೂ ರೈತರನ್ನು ರಕ್ಷಿಸುವಂತೆ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್ ವಿನಂತಿಸಿದರು.

ಈ ಸಂದರ್ಭದಲ್ಲಿ ಡಿಸಿಎಫ್ ಪುಲಿಕಿತ್ ಮೀನಾ, ಎಸಿಎಫ್ ಶರೀಫಾ, ಆರ್‌ಎಫ್ ಒ ಯತೀಶ್, ಎಟಿಎಫ್ ಸುನೀಲ್, ಬಿಆರ್‌ಎಫ್‌ಒ ಯತೀಶ್, ಗ್ರಾಪಂ ಅಧ್ಯಕ್ಷ ಹೇಮಚಂದ್ರ, ಮಮತಾ ತುಳಸಿದಾಸ್, ಮಂಡಲದ ಅಧ್ಯಕ್ಷ ಕೌರಿ ಸಂಜು, ಇತರರು ಹಾಜರಿದ್ದರು.

* ಹೇಳಿಕೆ:

ಈಗಾಗಲೇ ಆನೆ ಹಿಡಿಯುವ ಕಾರ್ಯಾಚರಣೆ ಶುರುಮಾಡಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ರತಿನಿತ್ಯ ಅರಣ್ಯ ಇಲಾಖೆ ಜೊತೆ ಪೊಲೀಸರು ಸಾರ್ವಜನಿಕರಿಗೆ ಹಾಗೂ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಇದಕ್ಕೆ ಸಹಕರಿಸುವಂತೆ ತಿಳಿಸಲಾಗಿದೆ.

- ಎಂ ಮಮತಾ, ತಹಸೀಲ್ದಾರ್‌