ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ಸಂಗ್ರಹಣ ಕೇಂದ್ರಕ್ಕೆ ಚಾಲನೆ

| Published : Jun 09 2024, 01:37 AM IST

ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ಸಂಗ್ರಹಣ ಕೇಂದ್ರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾನಿಗಳಿಂದ ಪಡೆದ ರಕ್ತವನ್ನು ವಿಮ್ಸ್ ಬ್ಲಡ್ ಬ್ಯಾಂಕ್ ಮೂಲಕ ಪಡೆದುಕೊಂಡು ಆದ್ಯತೆ ಮೇರೆಯ ರಕ್ತದ ಗುಂಪುಗಳ ಅನ್ವಯ ಸಂಗ್ರಹಿಸಿ ಇಡಲಾಗುವುದು.

ಬಳ್ಳಾರಿ: ರಕ್ತದಾನದ ಮಹತ್ವದ ಬಗ್ಗೆ ಯುವ ಸಮುದಾಯಕ್ಕೆ ಮತ್ತಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದ್ದು, ರಕ್ತದಾನ ಪ್ರಯೋಜನಗಳ ಕುರಿತು ಅರಿವು ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ಅಭಿಪ್ರಾಯಪಟ್ಟರು.

ಸಂಡೂರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಟಾಸ್ಕ್ ಫೋರ್ಸ್, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಕ್ತ ಸುರಕ್ಷತಾ ಸಮಿತಿ ಹಾಗೂ ಏಡ್ಸ್ ನಿಯಂತ್ರಣ ಘಟಕದ ಅಡಿಯಲ್ಲಿ ಜಿಲ್ಲೆಯಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ಆರಂಭವಾದ ಮೊಟ್ಟ ಮೊದಲ ರಕ್ತ ಸಂಗ್ರಹಣ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣ ಘಟಕಗಳಿದ್ದು, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ವಿಸ್ತರಿಸಲು, ಸತತ ಪ್ರಯತ್ನದ ಫಲವಾಗಿ ಪ್ರಸ್ತುತ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ಸಂಗ್ರಹ ಘಟಕವನ್ನು ಆರಂಭಿಸಲಾಗಿದೆ.

ದಾನಿಗಳಿಂದ ಪಡೆದ ರಕ್ತವನ್ನು ವಿಮ್ಸ್ ಬ್ಲಡ್ ಬ್ಯಾಂಕ್ ಮೂಲಕ ಪಡೆದುಕೊಂಡು ಆದ್ಯತೆ ಮೇರೆಯ ರಕ್ತದ ಗುಂಪುಗಳ ಅನ್ವಯ ಸಂಗ್ರಹಿಸಿ ಇಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆಯುವ ಮೂಲಕ ರಕ್ತದ ಕೊರತೆಯಾಗದಂತೆ ತಾವು ಸಹಿತ ಮುಂದೆ ಬಂದು ರಕ್ತದಾನ ಮಾಡುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ವಿನಂತಿಸಿದರು.

ಜಗತ್ತಿನಲ್ಲಿ ಅತಿ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದಾಗಿದೆ. ಇದರಿಂದ ಹಲವಾರು ಜನರ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಸಾವಿನಿಂದ ಪಾರು ಮಾಡಲು ಸಾಧ್ಯವಿದೆ. ಹಾಗಾಗಿ, ರಕ್ತದಾನ ಮಾಡುವುದರಿಂದ ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀಯರಿಗೆ, ಶಸ್ತ್ರಚಿಕಿತ್ಸೆ ಹೆರಿಗೆ ವೇಳೆ, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಥ್ಯಾಲಿಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳ ಜೀವವನ್ನು ಉಳಿಸಲು ಮುಂದೆ ಬರಬೇಕು ಎಂದರು.

ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಹಾಗೂ ಸಂಡೂರು ತಾಲೂಕು ನೋಡೆಲ್ ಅಧಿಕಾರಿಯೂ ಆದ ಡಾ. ಆರ್. ಅಬ್ದುಲ್ಲಾ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತವೇ ದೇಹದ ಜೀವನಾಡಿಯಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲದೆ ಇರುವುದರಿಂದ ಇನ್ನೊಬ್ಬರಿಂದ ದಾನದ ಮೂಲಕ ಮಾತ್ರ ರಕ್ತವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

18 ರಿಂದ 60 ವರ್ಷದ ಒಳಗಿನ ಎಲ್ಲ ಆರೋಗ್ಯವಂತ ಪುರುಷ ಮತ್ತ ಮಹಿಳೆಯರು ರಕ್ತದಾನ ಮಾಡುವ ಅವಕಾಶವಿದ್ದು, 45 ಕೆಜಿ ಮೇಲ್ಪಟ್ಟ ಹಾಗೂ 12.5 ಗ್ರಾಮಗಿಂತ ಹೆಚ್ಚು ಹಿಮೋಗ್ಲೊಬಿನ್ ಇರುವ ಮಹಿಳೆಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಪ್ರತಿ ಮೂರು ತಿಂಗಳಿಗೊಮ್ಮೆ ಪುರುಷರು ತಪ್ಪದೇ ರಕ್ತದಾನ ಮಾಡಬಹುದು. ಇದರಿಂದ ತಮ್ಮ ಆರೋಗ್ಯ ಉಲ್ಲಾಸ ಮಾಯವಾಗಿಸಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದೆ ಬರಬೇಕೆಂದು ವಿನಂತಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಮೇಲ್ವಿಚಾರಕ ಗಿರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಸಂಚಾರ ರಕ್ತದಾನ ಘಟಕದ ಮೂಲಕ ಉಚಿತ ಸ್ವಯಂ ಪ್ರೇರಿತ ಶಿಬಿರವನ್ನು ಏರ್ಪಡಿಸಲಾಗಿದ್ದು, ಇಲ್ಲಿಯ ವರೆಗೂ 79 ಬಾರಿ ರಕ್ತದಾನ ಮಾಡಿರುವ ಎಸ್.ಕೆ. ಸಿಂಗ್ ಅವರು ಶಿಬಿರದಲ್ಲಿ 80 ಬಾರಿಗೆ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಸಂಡೂರು ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಪ್ರಸೂತಿ ತಜ್ಞರಾದ ಡಾ. ರಜಿಯಾ, ಮಕ್ಕಳ ತಜ್ಞ ಡಾ. ಮಣಿಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್‌. ದಾಸಪ್ಪನವರ, ಶಿವರಾಮು, ಬಸವರಾಜ್, ಮಂಜುನಾಥ್, ವೆಂಕಟೇಶ್ ನಾಯ್ಕ್, ಪ್ರಶಾಂತ್, ಸೈಯದ್ ಅನ್ಸಾರಿ, ಮಾಲಾ, ಲಕ್ಷ್ಮೀ, ರೂಪಾ, ಹುಲಿಗೆಮ್ಮ ಸೇರಿದಂತೆ ಸಾರ್ವಜನಿಕರು, ತಾಯಂದಿರು, ಗರ್ಭಿಣಿಯರು ಹಾಜರಿದ್ದರು.