ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ಎಪಿಎಂಸಿ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಜೋಳ ಖರೀದಿ ಕೇಂದ್ರವನ್ನು ಶಾಸಕ ಜೆ.ಎನ್. ಗಣೇಶ್ ಶನಿವಾರ ಉದ್ಘಾಟಿಸಿದರು.
ಕಂಪ್ಲಿ:ತಾಲೂಕಿನ ಎಮ್ಮಿಗನೂರಿನ ಎಪಿಎಂಸಿ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಜೋಳ ಖರೀದಿ ಕೇಂದ್ರವನ್ನು ಶಾಸಕ ಜೆ.ಎನ್. ಗಣೇಶ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಇ. ಜಡೇಶರೆಡ್ಡಿ ಮಾತನಾಡಿ, ಒಟ್ಟು 1280 ರೈತರಿಂದ ಸುಮಾರು 59 ಸಾವಿರ ಕ್ವಿಂಟಲ್ ಜೋಳ ಖರೀದಿಸುವ ಯೋಜನೆ ರೂಪಿಸಲಾಗಿದೆ. ನೋಂದಣಿ ಪಟ್ಟಿಯ ಪ್ರಕಾರವೇ ಜೋಳ ಖರೀದಿ ನಡೆಯಲಿದ್ದು, ರೈತರು ಗುಣಮಟ್ಟದ ಜೋಳ ತರಬೇಕು ಎಂದು ಮನವಿ ಮಾಡಿದರು.ಜೋಳದ ಚೀಲಗಳಿಗೆ 11 ಹೊಲಿಗೆ ಹಾಕುವುದು ಹಾಗೂ ಗುರುತು ಸಂಖ್ಯೆ ನೀಡುವುದು ಕಡ್ಡಾಯವಾಗಿದ್ದು, ಹಮಾಲಿ ದರವನ್ನು ಪ್ರತಿ ಕ್ವಿಂಟಲ್‌ಗೆ ₹28 ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಯಿಂದ ಹೆಚ್ಚುವರಿ ದರ ನಿಗದಿ ಮಾಡಿದಲ್ಲಿ ಅದು ಅನ್ವಯವಾಗಲಿದೆ ಎಂದು ತಿಳಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಹಾಗೂ ತಾಲೂಕು ಅಧ್ಯಕ್ಷ ವಿ. ವೀರೇಶ್ ಮಾತನಾಡಿ, ಜೋಳ ಬೆಳೆದ ರೈತರಿಗೆ ಅನುಕೂಲವಾಗುವಂತೆ ಕನಿಷ್ಠ 20 ಕ್ವಿಂಟಲ್ ಜೋಳವನ್ನು ಖರೀದಿಸುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕಾಗಿದೆ. ಮುಂದಿನ ಹಂಗಾಮಿನಲ್ಲಿ ಈ ಮಿತಿಯನ್ನು 25 ಕ್ವಿಂಟಲ್‌ಗೆ ಹೆಚ್ಚಿಸುವಂತೆ ಆಗ್ರಹಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಪ್ರತಿ ಎಕರೆಗೆ 15 ಕ್ವಿಂಟಲ್ ಬದಲಿಗೆ 20 ಕ್ವಿಂಟಲ್ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿದರು. ಖರೀದಿ ಕೇಂದ್ರ ಆರಂಭದಲ್ಲಿ ವಿಳಂಬವಾಗುವುದರಿಂದ ಜೋಳ ಸಂಗ್ರಹಿಸುವ ಹೊಣೆ ಹೆಚ್ಚಾಗುತ್ತಿದ್ದು, ಹುಳು ಬಾಧೆ, ಮಳೆ ಹಾಗೂ ಇತರ ಪ್ರಾಕೃತಿಕ ಕಾರಣಗಳಿಂದ ಧಾನ್ಯ ಹಾನಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಕೊಯ್ಲಾದ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.
ಇನ್ನೊಂದೆಡೆ, ಹಮಾಲಿ ದರವನ್ನು ಪ್ರತಿ ಕ್ವಿಂಟಲ್‌ಗೆ ₹32ಕ್ಕೆ ಹೆಚ್ಚಿಸುವಂತೆ ಹಮಾಲರು ಒತ್ತಾಯಿಸಿದ ವೇಳೆ ರೈತರು ಮತ್ತು ಹಮಾಲರ ನಡುವೆ ಕೆಲಕಾಲ ಮಾತಿನ ಚಕಮಕಿ ಉಂಟಾಯಿತು. ಬಳಿಕ ಪರಿಸ್ಥಿತಿ ಶಾಂತಗೊಂಡಿತು.ರೈತರ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಖಾಸಿಂಸಾಬ್, ಪ್ರಮುಖರಾದ ಬಿ. ಮಹೇಶಗೌಡ, ಬಿ. ಸದಾಶಿವಪ್ಪ, ಪ್ರವೀಣ್, ವೈ. ರಾಘವೇಂದ್ರರೆಡ್ಡಿ, ಅಶ್ವತ್ಥರೆಡ್ಡಿ, ರೈತ ಸಂಘದ ಪದಾಧಿಕಾರಿಗಳಾದ ಕೊಟ್ಟೂರು ರಮೇಶ, ಮುರಾರಿ, ಜಡೆಪ್ಪ ಸೇರಿದಂತೆ ಅನೇಕ ರೈತರು ಮತ್ತು ಹಮಾಲರು ಉಪಸ್ಥಿತರಿದ್ದರು.