ಸಾರಾಂಶ
ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫೆ. 16ರ ರಥಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಫೆ. 26ರಂದು ಕಾರ್ಣಿಕ ನುಡಿ ಹಾಗೂ ಫೆ. 27ರಂದು ಸರಪಳಿ ಪವಾಡದ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಈ ಬಾರಿ ದೇವಸ್ಥಾನದ ಪೂಜೆ ಸಲ್ಲಿಸಿ ಕಾಯಿಸಿದ ಹಾಲು ದಕ್ಷಿಣ ದಿಕ್ಕಿನ ಕುಬೇರನ ಮೂಲೆಯ ಕಡೆಗೆ ಹರಿದಿದ್ದು, ಕಾಯ್ದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ- ಬೆಳೆ ಸಮೃದ್ಧವಾಗಲಿದೆ ಎಂಬ ನಂಬಿಕೆ ಭಕ್ತರದ್ದು. ಕಳೆದ ಬಾರಿ ಹಾಲು ದಕ್ಷಿಣ ದಿಕ್ಕಿನ ಕಡೆಗೆ ಹರಿದಿತ್ತು.ದೇವಸ್ಥಾನದ ರಂಗಮಂಟಪದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಅವರು, ಕಾರ್ಣಿಕ ನುಡಿಯಲು ಗೊರವಪ್ಪ ಏರುವ ಐತಿಹಾಸಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಬಾಬುದಾರರು, ಮೈಲಾರ ಗ್ರಾಮದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸಲಾಯಿತು. ಕಾರ್ಣಿಕ ನುಡಿಯುವ ಗೊರವಯ್ಯ ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತಾರೆ. ಜತೆಗೆ ಭಂಡಾರದ ನೀರು ಮಾತ್ರ ಸೇವಿಸುತ್ತಾರೆ.
ಸ್ವಾಮಿಯ ಪಲ್ಲಕಿಯ ಮೌನ ಸವಾರಿ ಉತ್ಸವವು ಡೆಂಕಣ ಮರಡಿಗೆ ತೆರಳಿ 11 ದಿನಗಳ ಕಾಲ ಅಲ್ಲಿಯೇ ಇಡಲಾಗುತ್ತಿದೆ. ನಿತ್ಯ ದೇವಸ್ಥಾನದ ಅರ್ಚಕರು, ಡೆಂಕಣ ಮರಡಿಗೆ ಹೋಗಿ ದಿನಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಹಾಕಲಾಗಿರುವ ಗಂಟೆಗಳನ್ನು ತೆಗೆಯಲಾಯಿತು. ಜತೆಗೆ ದೇವಸ್ಥಾನದಲ್ಲಿ 11 ದಿನ ಯಾವುದೇ ಪೂಜೆ ಜರುಗುವುದಿಲ್ಲ. ಡೆಂಕಣ ಮರಡಿಯನ್ನು ಹಗಲು- ರಾತ್ರಿ ಕಾಯುವ ಕಾಯಕದಲ್ಲಿ ಹರಕೆ ತೀರಿಸುವ ಭಕ್ತರಿಗೆ ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕವನ್ನು ನೀಡಲಾಗುತ್ತಿದೆ. ಇಂದಿನಿಂದ(ಶುಕ್ರವಾರ) ತಾವು 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತೇವೆಂದು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮಾಹಿತಿ ನೀಡಿದರು.ಫೆ. 16ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಹಾಲು ಉಕ್ಕಿಸಲಾಯಿತು. ಈ ಧಾರ್ಮಿಕ ಕಾರ್ಯಕ್ಕೆ ಭಕ್ತರು ಅಕ್ಕಿ, ಬೆಲ್ಲ, ದವಸ, ಧಾನ್ಯಗಳನ್ನು ತಂದು ದೇವರಿಗೆ ಅರ್ಪಿಸಿದರು. ಆಕಳ ಸಗಣಿಯಿಂದ ಮಾಡಿದ ಕುಳ್ಳುಗಳಿಂದ ದೇವರ ಸನ್ನಿಧಾನದಲ್ಲಿ ಹಾಲು ಕಾಯಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಕಾರ್ಯಕರ್ತ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ ಕಾರ್ಣಿಕದ, ಅರ್ಚಕ ಪ್ರಮೋದ ಭಟ್, ದೇವಸ್ಥಾನದ ಇಒ ಕೃಷ್ಣಪ್ಪ, ದೇವಸ್ಥಾನದ ಬಾಬುದಾರರು ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.ಪೌರಾಣಿಕ ಹಿನ್ನೆಲೆ: ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕೂಗಳತೆ ದೂರದ ಡೆಂಕಣ ಮರಡಿಗೆ, ದೇವಲೋಕದ 7 ಕೋಟಿ ದೇವಾನುದೇವತೆಗಳು ಮಾರುವೇಷದಲ್ಲಿ ರಥಸಪ್ತಮಿ ದಿನವೇ ಬಂದಿರುತ್ತಾರೆ. 11 ದಿನಗಳ ಕಾಲ ಡೆಂಕಣ ಮರಡಿ ಪಕ್ಕದಲ್ಲಿರುವ ಅವ್ವನ ಮರಡಿ(ಗಂಗಿಮಾಳಮ್ಮ ಮರಡಿ)ಯಲ್ಲಿ ರಾಕ್ಷಸರೊಂದಿಗೆ ಮೈಲಾರಲಿಂಗ(ಶಿವ), ಗಂಗಿಮಾಳಮ್ಮ(ಪಾರ್ವತಿ) ಸೇರಿದಂತೆ 7 ಕೋಟಿ ದೇವಾನುದೇವತೆಗಳು ಕದನ ಮಾಡುತ್ತಾರೆ. ಈ ಪೌರಾಣಿಕ ಹಿನ್ನೆಲೆಯಂತೆ ರಥಸಪ್ತಮಿಯ ದಿನದಂದು ಭಕ್ತರು, ನೈವೇದ್ಯಕ್ಕೆ ತರುವ ಸಜ್ಜೆ ಕಡಬು ಮತ್ತು ಗೊರವಯ್ಯನ ಬಳಿ ಇರುವ ಬಿಲ್ಲು, ಗುರುಗಳ ಕೈಯಲ್ಲಿ ಬತ್ತಳಿಕೆಗಳನ್ನು ಇಟ್ಟುಕೊಂಡು ಪರಸ್ಪರ ಹೊಡೆದಾಡಿಕೊಳ್ಳುವ, ಕಡುಬಿನ ಕಾಳಗ ಕೂಡಾ ಶುಕ್ರವಾರ ರಾತ್ರಿ ದೇವಸ್ಥಾನದಿಂದ ಡೆಂಕಣ ಮರಡಿಗೆ ಹೋಗುವ ಸಂದರ್ಭದಲ್ಲಿ ನಡೆಯುತ್ತದೆ.