ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರ್ಯದರ್ಶಿಯಾಗಿರುವ ಶ್ರೀ ರಾಮಚಂದ್ರ ವಿದ್ಯಾಸಂಸ್ಥೆಗೆ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹೆಸರಿನಲ್ಲಿರುವ 1.04 ಎಕರೆ ಜಮೀನು ಪರಭಾರೆ ಮಾಡುವಂತೆ ಒತ್ತಡ ಹೇರಿದ್ದು, ಇದಕ್ಕೆ ಒಪ್ಪದ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸಮಾಜದ ಮುಖಂಡರನ್ನು ದಾರಿ ತಪ್ಪಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ಎಸ್ ನಂಜುಂಡಸ್ವಾಮಿ ನೇರ ಆರೋಪ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ದಿ. ಕೆ.ಸಿ. ರಂಗಯ್ಯ ಸಮಾಜದ ಅಧ್ಯಕ್ಷರಾಗಿದ್ದಾಗ ಶ್ರೀ ರಾಮಚಂದ್ರ ವಿದ್ಯಾ ಸಂಸ್ಥೆಯನ್ನು ಆರಂಭಿಸಲು ಸಂಘಕ್ಕೆ ಸೇರಿದ ಸರ್ವೆ ನಂ, 379/4ಎ ನಲ್ಲಿರುವ 1.04 ಎಕರೆ ಜಾಗವನ್ನು ಬಳಕೆ ಮಾಡಿಕೊಂಡು ಕಟ್ಟಡವನ್ನು ನಿರ್ಮಿಸಿಕೊಂಡಿದ್ದರು. ಬಹಳ ವರ್ಷಗಳ ಕಾಲ ಎರಡು ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದ ಕಾರಣದಿಂದ ಮುಂದುವರಿದು ಕೊಂಡುಬಂದಿತ್ತು. ಕೆ.ಸಿ. ರಂಗಯ್ಯ ಕಾಲವಾದ ನಂತರ ನಾನು ಅಧ್ಯಕ್ಷನಾದೆ. ಇದೇ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಎ.ಆರ್. ಕೃಷ್ಣಮೂರ್ತಿ 2023ರ ಜುಲೈ 12 ರಂದು ಸಂಘಕ್ಕೆ ಪತ್ರ ಬರೆದು. ಇದನ್ನು ಸಂಸ್ಥೆಗೆ ಬರೆದುಕೊಂಡುವಂತೆ ಮನವಿ ಮಾಡಿದ್ದರು.
ಈ ಪತ್ರವನ್ನು ನಾನು ಸಭೆಯಲ್ಲಿಟ್ಟು ಪ್ರಸ್ತಾಪ ಮಾಡಿದಾಗ ಇತರೇ ನಿರ್ದೇಶಕರು ಚರ್ಚೆ ಮಾಡಿ, ಮುಂದಿನ ಸಭೆಯಲ್ಲಿ ಇತ್ಯರ್ಥ ಪಡಿಸೋಣ ಎಂಬ ಸಲಹೆಯನ್ನು ನೀಡಿದ್ದರು. ಹೀಗಾಗಿ ಅವರ ಮನವಿಯಂತೆ ಸಂಸ್ಥೆಗೆ ಸಮಾಜದ ಆಸ್ತಿಯನ್ನು ಪರಭಾರೆ ಮಾಡಲಿಲ್ಲ. ಇದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡಿರುವ ಕೃಷ್ಣಮೂರ್ತಿ ಮತ್ತು ಅವರ ಬೆಂಬಲಿಗರು ನನ್ನ ವಿರುದ್ಧ ಸಮಾಜದ ಆಸ್ತಿ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ನಂಜುಂಡಸ್ವಾಮಿ ಪ್ರಶ್ನೆ ಮಾಡಿದರು.ನಾನು ಅಧ್ಯಕ್ಷನಾದ ಬಳಿಕ ಸಂಘವನ್ನು ಸುಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಪ್ರತಿ ತಿಂಗಳು ಸಂಘಕ್ಕೆ 2 ಲಕ್ಷ ರು. ಆದಾಯ ಬರುವಂತೆ ಮಾಡಿದ್ದೇನೆ. ಒಂದು ಉತ್ತಮ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದೇ ತಪ್ಪಾಯಿತೆ? ಅಲ್ಲದೇ ಸಂಘದ ಇತರೇ ಆಸ್ತಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿದ್ದೇನೆ. ಈಗಾಗಲೇ ನಾನು ಯಾವ ತನಿಖೆಗೂ ಸಿದ್ಧ ಎಂದು ನಂಜುಂಸ್ವಾಮಿ ಪುನುರುಚ್ಚಿಸಿದರು.
ಕೃಷ್ಣಮೂರ್ತಿ ವಿರುದ್ಧ ಸ್ವೀಕರ್‌ಗೆ ದೂರು:ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಸಮುದಾಯ ಮುಖಂಡರ ಪ್ರತಿಭಟನೆ ಸಭೆಯಲ್ಲಿ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ಧಾರೆ. ಅಲ್ಲದೇ ನಮ್ಮ ಸಮುದಾಯ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಎಚ್ಚರಿಕೆ ನೀಡಿರುವುದು ಸ್ಥಳೀಯ ಶಾಸಕರಿಗೆ ಮಾಡಿದ ಅಪಮಾನವಾಗಿದೆ. ಶಾಸಕರು ಒಂದು ಸಮುದಾಯದಿಂದ ಆಯ್ಕೆಯಾದವರಲ್ಲ. ಅವರು ಎಲ್ಲಾ ಸಮುದಾಯದ ಮತಗಳಿಂದ ಶಾಸನ ಸಭೆಗೆ ಆಯ್ಕೆಯಾಗಿದ್ದಾರೆ. ಆದೇ ರೀತಿ ತಾವು ಸಹ ಕೊಳ್ಳೇಗಾಲ ಕ್ಷೇತ್ರದಿಂದ ಎಲ್ಲಾ ಸಮುದಾಯಗಳ ಮತಗಳನ್ನು ಪಡೆದು ಆಯ್ಕೆಯಾಗಿದ್ದೀರಿ ಎಂಬುದನ್ನು ಮರೆಯಬೇಡಿ. ಕೃಷ್ಣಮೂರ್ತಿ ಅವರು ಶಾಸಕರಿಗೆ ಅಪಮಾನ ಮಾಡಿರುವ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿರುವುದಾಗಿ ಎಸ್. ನಂಜುಂಡಸ್ವಾಮಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಾಜ್‌ಗೋಪಾಲ್, ಖಜಾಂಚಿ ಸಿ.ಕೆ.ರವಿಕುಮಾರ್, ನಿರ್ದೇಶಕರಾದ ಜ್ಯೋತಿಗೌಡನಪುರ ವೆಂಕಟೇಶ್, ಆಲೂರು ಎ.ಎಸ್. ಮಲ್ಲಣ್ಣ, ಮುಖಂಡರಾದ ರಾಮಸಮುದ್ರ ನಾಗರಾಜು, ಕಾಂತರಾಜು ಇದ್ದರು.