ದಾರ್ಶನಿಕರಿಂದ ಮಾನವ ಸಮೂಹಕ್ಕೆ ಉತ್ತಮ ಚಿಂತನೆ ಲಭ್ಯ: ಪುರಂದರ

| Published : Feb 17 2024, 01:19 AM IST

ದಾರ್ಶನಿಕರಿಂದ ಮಾನವ ಸಮೂಹಕ್ಕೆ ಉತ್ತಮ ಚಿಂತನೆ ಲಭ್ಯ: ಪುರಂದರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಕನ್ನಡಪ್ರಭ ವಾರ್ತೆ ಪುತ್ತೂರು

ದಾರ್ಶನಿಕರು ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡುವ ಮೂಲಕ ಈ ಸಮಾಜದಲ್ಲಿ ಒಂದಾಗಿ ಬದುಕಬೇಕು ಎನ್ನುವ ಪಾಠ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾವು ನಡೆದುಕೊಳ್ಳಬೇಕಾಗಿದೆ. ಸಂತರು ಸಮಾಜದಲ್ಲಿ ಜಾತಿ ಪದ್ಧತಿಯಂತಹ ದುಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ್ದಾರೆ ಎಂದು ಪುತ್ತೂರು ತಹಸೀಲ್ದಾರ್ ಪುರಂದರ ಹೇಳಿದರು. ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಜಾತಿಯ ಜತೆಗೆ ಅಂತಸ್ತಿಗಾಗಿ ಹೋರಾಟ ನಡೆಸುವ ಮನೋಭಾವ ಹೆಚ್ಚಾಗುತ್ತಿದೆ. ಇಂತಹ ಮಾನಸಿಕ ದೌರ್ಬಲ್ಯಗಳ ವಿರುದ್ಧ ಹೋರಾಡುವ ಚಿಂತನೆ ನಮ್ಮಲ್ಲಿ ಬೆಳೆಯಬೇಕಾಗಿದೆ. ಹಾಗಾದಾಗ ಮಾತ್ರ ಜೀವನದಲ್ಲಿ ನಾವು ಮುಂದೆ ಬರಬಹುದಾಗಿದೆ. ಇದಕ್ಕಾಗಿ ಮೊದಲು ನಮ್ಮ ದೌರ್ಬಲ್ಯಗಳನ್ನು ನಾವು ಅರಿತುಕೊಳ್ಳಬೇಕು. ಜಾತಿಗಳ ಅಭಿವೃದ್ಧಿಗಾಗಿ ನೀಡಲಾಗುವ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಇದು ಅಭಿವೃದ್ಧಿಗೆ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.

ಸವಿತಾ ಸಮಾಜದ ಮುಖಂಡ ರವೀಂದ್ರ ಭಂಡಾರಿ ಪಾಣಾಜೆ ಮಾತನಾಡಿ, ಸವಿತಾ ಸಮಾಜ ಮನುಷ್ಯನ ಹುಟ್ಟಿನಿಂದ ಸಾಯುವ ತನಕವೂ ಬೇಕಾಗುತ್ತದೆ. ಆದರೆ ಈ ಸಮಾಜವನ್ನು ಆರ್ಥಿಕತೆ ಮತ್ತು ಶಿಕ್ಷಣದ ಕೊರತೆ ಕಾಡುತ್ತಿದೆ. ಪುತ್ತೂರಿನಲ್ಲಿ ಸವಿತಾ ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು. ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದರು.

ಬಂಜಾರ ಸಮಾಜದ ಮುಖಂಡರಾದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ರೂಪ್ಲಾ ನಾಯಕ್ ಅವರು ಮಾತನಾಡಿ, ಬಂಜಾರ ಸಮಾಜದಲ್ಲಿ ಶೇ.೧೦ ರಷ್ಟು ಮಂದಿ ಮಾತ್ರ ಅಭಿವೃದ್ಧಿಯಾಗಿದ್ದಾರೆ, ಉಳಿದ ಶೇ.೯೦ ಮಂದಿ ಈಗಲೂ ಕಷ್ಟದಾಯಕ ಪರಿಸ್ಥಿತಿಯಲ್ಲೇ ಇದ್ದಾರೆ. ಈ ಸಮಾಜಕ್ಕೆ ಪೂರಕವಾದ ವ್ಯವಸ್ಥೆಗಳು ಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಈ ನಾಡಿನಲ್ಲಿ ಹಲವು ಸಂತ, ದಾರ್ಶನಿಕರು ಸಮಾಜಗಳ ನಡುವೆ ಇದ್ದ ಕಂದಕಗಳನ್ನು ಮುಚ್ಚಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಜನತೆಗೆ ಉತ್ತಮವಾದ ಜೀವನದಾರಿ ತೋರಿಸಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಜೀವನಕ್ಕೆ ಯಶಸ್ಸು ಸಿಗುತ್ತದೆ. ಹಿಂದುಳಿದ ಜನತೆ ಈ ಬಗ್ಗೆ ಯೋಚನೆ ಮಾಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾಪಂ ಯೋಜನಾಧಿಕಾರಿ ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ದಯಾನಂದ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.