ಚಿಟಗುಪ್ಪಿ ಆಸ್ಪತ್ರೆಯಲ್ಲಿ ಎನ್‌ಐಸಿಯು ಘಟಕಕ್ಕೆ ಚಾಲನೆ

| Published : Jul 08 2024, 01:33 AM IST / Updated: Jul 08 2024, 09:41 AM IST

ಸಾರಾಂಶ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಭಾನುವಾರ ಇನ್ನರ್‌ವೀಲ್ ಕ್ಲಬ್ ಹುಬ್ಬಳ್ಳಿ ಮಿಡ್‌ಟೌನ್, ರಾಮದೇವಿ ತ್ಯಾಗಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಿತ ಎನ್‌ಐಸಿಯು ಘಟಕ ಹಾಗೂ ಮಜೇಥಿಯಾ ಫೌಂಡೇಷನ್ ವತಿಯಿಂದ ಅಳವಡಿಸಿರುವ ಫಿಜಿಯೋಥೆರಪಿ ಹಾಗೂ ಪುನರ್ವಸತಿ ಕೇಂದ್ರ ಉದ್ಘಾಟಿಸಲಾಯಿತು.

 ಹುಬ್ಬಳ್ಳಿ :  ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಾಣವಾದ ಉನ್ನತದಜೆರ್ಯ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಎನ್‌ಐಸಿಯು ಘಟಕ, ಫಿಜಿಯೋಥೆರಪಿ, ಪುನರ್ವಸತಿ ಕೇಂದ್ರ ಆರಂಭವಾಗಿರುವುದು ಸಂತಸ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಭಾನುವಾರ ಇನ್ನರ್‌ವೀಲ್ ಕ್ಲಬ್ ಹುಬ್ಬಳ್ಳಿ ಮಿಡ್‌ಟೌನ್, ರಾಮದೇವಿ ತ್ಯಾಗಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಿತ ಎನ್‌ಐಸಿಯು ಘಟಕ ಹಾಗೂ ಮಜೇಥಿಯಾ ಫೌಂಡೇಷನ್ ವತಿಯಿಂದ ಅಳವಡಿಸಿರುವ ಫಿಜಿಯೋಥೆರಪಿ ಹಾಗೂ ಪುನರ್ವಸತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಬಹುದೊಡ್ಡ ಯೋಜನೆ ಸ್ಮಾರ್ಟ್‌ಸಿಟಿ. ಚಿಟಗುಪ್ಪಿ ಆಸ್ಪತ್ರೆಯನ್ನು ಇದೇ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಒಳ್ಳೆಯ ಸ್ಥಳಾವಕಾಶವಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾರ್ವಜನಿಕರಿಗಾಗಿ ಇನ್ನರ್‌ವೀಲ್ ಕ್ಲಬ್ ಹುಬ್ಬಳ್ಳಿ ಮಿಡ್‌ಟೌನ್ ಹಾಗೂ ಮಜೇಥಿಯಾ ಫೌಂಡೇಷನ್ ವತಿಯಿಂದ ನೂತನ ಘಟಕ ಆರಂಭಿಸಲಾಗಿದೆ. ಜನರಿಗೆ ಸಹಕಾರಿಯಾಗುವ ಉದ್ದೇಶದೊಂದಿಗೆ ಈ ಸೌಕರ್ಯ ಕಲ್ಪಿಸಿರುವ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪಾಲಿಕೆಯ ಮೇಯರ್‌ ರಾಮಣ್ಣ ಬಡಿಗೇರ, ಉಪಮೇಯರ್‌ ದುರ್ಗಮ್ಮ ಬಿಜವಾಡ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಕ್ಲಬ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಗೋಲ್ಡ್‌ ಪ್ಲಸ್ ಗ್ಲಾಸ್ ಇಂಡಸ್ಟ್ರೀಸ್‌ನ ಡಾ. ನೇಹಾ ತ್ಯಾಗಿ, ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣಾ ಕಲಕುಂಟ್ಲಾ ಸೇರಿದಂತೆ ಹಲವರಿದ್ದರು.