ನನ್ನ ಗೆಲುವಿಗೆ ನಿಮ್ಮ ವಿಶ್ವಾಸ ಕಾರಣ: ಡಾ. ಮಂಜುನಾಥ್‌

| Published : Jul 08 2024, 01:32 AM IST / Updated: Jul 08 2024, 12:42 PM IST

ನನ್ನ ಗೆಲುವಿಗೆ ನಿಮ್ಮ ವಿಶ್ವಾಸ ಕಾರಣ: ಡಾ. ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತಗಳಿಂದ ಗೆಲ್ಲಲು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳ ಶ್ರಮ,ಪ್ರೀತಿ , ವಿಶ್ವಾಸ ಕಾರಣ ಎಂದು  ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

 ಬೆಂಗಳೂರು : ರಾಷ್ಟ್ರ ರಾಜಕಾರಣದಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತಗಳಿಂದ ಗೆಲ್ಲಲು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳ ಶ್ರಮ,ಪ್ರೀತಿ , ವಿಶ್ವಾಸ ಕಾರಣ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರ ಹಳ್ಳಿ ವಾರ್ಡ್ ನ ಗುಬ್ಬಲಾಳ ಬಳಿಯ‌ ಮಹಾರಾಜ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುಮಾರು 2 ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಯುದ್ಧ ಮಾಡದೆ ವಿಜಯ ಸಾಧಿಸುವ ಶಾಸಕ ಎಂ.ಕೃಷ್ಣಪ್ಪ ಅವರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೆ 96000 ಮತಗಳ ಲೀಡ್ ನೀಡಿರುವ ನೀವುಗಳೆ ಅಭಿನಂದನೆಗೆ ಅರ್ಹರು ಎಂದರು.

ಕೇಂದ್ರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯನ್ನು 300 ಹಾಸಿಗೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ.ಎಲ್ಲ ಕಾರ್ಯಕರ್ತರ ಧ್ವನಿಯಾಗಿ ಅವರು ಕಷ್ಟಸುಖ ಆಲಿಸಿ ಸಂಘಟನೆ ಮೂಲಕ ಒಗ್ಗೂಡಿಸಿ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಸ್ವತಂತ್ರವಾಗಿ ಬಿಜೆಪಿ ಸರ್ಕಾರ ರಚನೆ ಮಾಡುವ ಗುರಿ ಹೊಂದಲಾಗಿದೆ. 

ಈ ಸಾಧನೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಉತ್ತರಹಳ್ಳಿಯ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಸ್ತೆಯ ಮೂಲಕ ತೆರೆದು ವಾಹನದಲ್ಲಿ ಮೆರವಣಿಗೆ ಮೂಲಕ ಸಂಸದ ಮತ್ತು ರಾಜ್ಯಾಧ್ಯಕ್ಷರನ್ನು ಕರೆತರಲಾಯಿತು. ಈ ವೇಳೆ ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ರಾಜು, ಹನುಮಂತಯ್ಯ,ಶಾಂತಾ ಬಾಬು, ಮುಖಂಡರಾದ ಟಿ.ನಾರಾಯಣ್, ಜಯರಾಮ್, ಹುಲ್ಲಹಳ್ಳಿ ಶ್ರೀನಿವಾಸ್, ಎಂ.ಸುಬ್ರಮಣಿ, ಮಂಡಲಾಧ್ಯಕ್ಷರಾದ ರಾಜಶೇಖರ್ ರೆಡ್ಡಿ, ಕೇಶವ ರಾಜು ಸೇರಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.