ಓಟಿಎಸ್‌ ಅಡಿ ಸಂಗ್ರಹವಾಗಿದ್ದು ಕೇವಲ 463 ಕೋಟಿ

| Published : Jul 08 2024, 01:30 AM IST / Updated: Jul 08 2024, 09:48 AM IST

BBMP

ಸಾರಾಂಶ

ಹಲವಾರು ವರ್ಷದಿಂದ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ‘ಒನ್‌ ಟೈಮ್ ಸೆಟ್ಟಲ್ಮೆಂಟ್‌’ (ಓಟಿಎಸ್‌) ಯೋಜನೆ ಜಾರಿಗೊಳಿಸಿದರೂ ಸುಸ್ತಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪಾವತಿಸಲು ಮುಂದಾಗುತ್ತಿಲ್ಲ. ಓಟಿಎಸ್‌ಯಡಿ ಈವರೆಗೆ ಕೇವಲ 463 ಕೋಟಿ ರು.ಗಳಷ್ಟೇ ವಸೂಲಿಯಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಹಲವಾರು ವರ್ಷದಿಂದ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ‘ಒನ್‌ ಟೈಮ್ ಸೆಟ್ಟಲ್ಮೆಂಟ್‌’ (ಓಟಿಎಸ್‌) ಯೋಜನೆ ಜಾರಿಗೊಳಿಸಿದರೂ ಸುಸ್ತಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪಾವತಿಸಲು ಮುಂದಾಗುತ್ತಿಲ್ಲ. ಓಟಿಎಸ್‌ಯಡಿ ಈವರೆಗೆ ಕೇವಲ 463 ಕೋಟಿ ರು.ಗಳಷ್ಟೇ ವಸೂಲಿಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇ.50 ರಷ್ಟು ದಂಡ ಹಾಗೂ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿ ‘ಒನ್‌ ಟೈಮ್ ಸೆಟ್ಟಲ್ಮೆಂಟ್‌’ (ಓಟಿಎಸ್‌) ಯೋಜನೆಯನ್ನು ಫೆ.27 ರಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಜುಲೈ31ಕ್ಕೆ ಮುಕ್ತಾಯಗೊಳ್ಳಿದೆ.

ಇದರಿಂದ ಬಿಬಿಎಂಪಿಗೆ ಸುಮಾರು 1 ಸಾವಿರ ಕೋಟಿ ರು.ಗೂ ಅಧಿಕ ಪ್ರಮಾಣ ತೆರಿಗೆ ವಸೂಲಿ ಆಗುವ ನಿರೀಕ್ಷೆಯನ್ನು ಹೊಂದಾಗಿತ್ತು. ಯೋಜನೆ ಮುಕ್ತಾಯಕ್ಕೆ ಕೇವಲ 24 ದಿನ ಮಾತ್ರ ಬಾಕಿ ಉಳಿಸಿದ್ದು, ಈವರೆಗೆ ಕೇವಲ 463.03 ಕೋಟಿ ರು. ಮಾತ್ರ ವಸೂಲಿಯಾಗಿದೆ.

ಇನ್ನೂ 3.24 ಲಕ್ಷ ಸುಸ್ತಿದಾರರು:

ನಗರ ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು ಇದ್ದರು. ಈ ಪೈಕಿ ಈವರೆಗೆ ಅರ್ಧದಷ್ಟು ಆಸ್ತಿ ಮಾಲೀಕರು ಮಾತ್ರ ಆಸ್ತಿ ತೆರಿಗೆ ಪಾವತಿ ಮಾಡಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇನ್ನೂ 3.24 ಲಕ್ಷ ಆಸ್ತಿ ಮಾಲೀಕರಿಂದ 624 ಕೋಟಿ ರು. ಆಸ್ತಿ ತೆರಿಗೆ ಬಾಕಿ ವಸೂಲಿ ಆಗಬೇಕಿದೆ.

ಇನ್ನೂ 5 ರಿಂದ 7 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಈ ಪೈಕಿ ಕೆಲವು ಮಂದಿ ಯೋಜನೆಯನ್ನು ಬಳಕೆ ಮಾಡಿಕೊಂಡು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಾರೆ. ಆದರೂ ಬಿಬಿಎಂಪಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಬಾಕಿ ವಸೂಲಿ ಆಗಿಲ್ಲ.

ನೋಟಿಸ್‌ಗೆ ಕ್ಯಾರೇ ಎನ್ನುತ್ತಿಲ್ಲ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ 3.95 ಲಕ್ಷ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿತ್ತು. ಈ ಪೈಕಿ ಕೇವಲ 70 ಸಾವಿರ ಆಸ್ತಿ ಮಾಲೀಕರು ಮಾತ್ರ ಪಾವತಿ ಮಾಡಿದ್ದಾರೆ. ಉಳಿದವರು ಬಿಬಿಎಂಪಿಯ ನೋಟಿಸ್‌ ಗೆ ಕ್ಯಾರೇ ಎಂದಿಲ್ಲ. ಇನ್ನು ತಪ್ಪಾಗಿ ಆಸ್ತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದ ಸುಮಾರು 17 ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಸರಿಯಾಗಿ ತೆರಿಗೆ ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಈ ಪೈಕಿ ಬಹುತೇಕರು ಬಿಬಿಎಂಪಿಯ ಬೇಡಿಕೆ ಪತ್ರಕ್ಕೆ ಉತ್ತರ ನೀಡಿಲ್ಲ.

ಓಟಿಎಸ್‌ ಅಡಿ ಸಂಗ್ರಹ-ಬಾಕಿ ಆಸ್ತಿ ತೆರಿಗೆ ವಿವರ (ಫೆ.27ರಿಂದ ಜು.7)

ವಲಯವಸೂಲಿಬಾಕಿ

ಬೊಮ್ಮನಹಳ್ಳಿ73.982.77

ದಾಸರಹಳ್ಳಿ16.3722.21

ಪೂರ್ವ70.5787.14

ಮಹದೇವಪುರ109.37140.04

ಆರ್‌ಆರ್‌ನಗರ33.7849.74

ದಕ್ಷಿಣ71.9496.63

ಪಶ್ಚಿಮ50.8397.18

ಯಲಹಂಕ36.2749.16

ಒಟ್ಟು463.03624.88

ಸಂಗ್ರಹದಲ್ಲಿಯೂ ಇಳಿಕೆ 

ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ ಅಂತ್ಯದ ವರೆಗೆ 2,287 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಆಗಿತ್ತು. ಆದರೆ, ಈ ಬಾರಿ ಜುಲೈ7ರ ವರೆಗೆ ಕೇವಲ 1,758 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 528 ಕೋಟಿ ರು. ಕಡಿಮೆ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಓಟಿಎಸ್‌ ಅಡಿ ಬಡ್ಡಿ ಮತ್ತು ದಂಡ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. 2024-25ನೇ ಸಾಲಿನ ಜುಲೈ 7 ವರೆಗೆ ಯಲಹಂಕ ವಲಯದಲ್ಲಿ 139.22 ಕೋಟಿ ರು. ಸಂಗ್ರಹವಾಗಿದೆ. ಮಹದೇವಪುರದಲ್ಲಿ 398.79 ಕೋಟಿ, ದಾಸರಹಳ್ಳಿ 60.37 ಕೋಟಿ, ಆರ್‌ಆರ್‌ನಗರ 125.95 ಕೋಟಿ, ಬೊಮ್ಮನಹಳ್ಳಿ 203.85 ಕೋಟಿ, ದಕ್ಷಿಣ 294.21 ಕೋಟಿ, ಪಶ್ಚಿಮ 211.54 ಕೋಟಿ ಹಾಗೂ ಪೂರ್ವ ವಲಯದಲ್ಲಿ 324.33 ಕೋಟಿ ರು. ಆಸ್ತಿ ತೆರಿಗೆ ವಸೂಲಿಯಾಗಿದೆ.