ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ

| N/A | Published : Aug 05 2025, 05:48 AM IST

Vidhan soudha

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್ ಆಯೋಗದ ವರದಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಕೆಯಾಗಿದ್ದು, ಆ.7ರಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಜಾರಿ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ.

ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್ ಆಯೋಗದ ವರದಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಕೆಯಾಗಿದ್ದು, ಆ.7ರಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಜಾರಿ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ.

ತನ್ಮೂಲಕ 30 ವರ್ಷಗಳಿಂದ ಒಳ ಮೀಸಲಾತಿ ಜಾರಿ ಕುರಿತ ಬೇಡಿಕೆ ನಿರ್ಣಾಯಕ ಘಟ್ಟ ತಲುಪಿದೆ. ಮೂಲಗಳ ಪ್ರಕಾರ, ಎಡಗೈ ಸಮುದಾಯಗಳಿಗೆ ಶೇ.6.5, ಬಲಗೈ ಸಮುದಾಯಗಳಿಗೆ ಶೇ.5.5, ಸ್ಪೃಶ್ಯ ಸಮುದಾಯಗಳಿಗೆ ಶೇ.4 ಹಾಗೂ ಇತರೆ ಉಪಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ ನಿಗದಿ ಮಾಡಲು ಆಯೋಗ ಶಿಫಾರಸು ಮಾಡಿರುವ ಸಾಧ್ಯತೆಯಿದೆ.

ಈ ನಿರೀಕ್ಷೆಯಂತೆಯೇ ಶಿಫಾರಸು ಆಗಿದ್ದರೆ ಅದು ಎಡಗೈ ಸಮುದಾಯಕ್ಕೆ ಸಮಾಧಾನ ನೀಡುವ ಸಾಧ್ಯತೆಯಿದೆ. ಏಕೆಂದರೆ, ಎಡಗೈ ಸಮುದಾಯವು ಶೇ. 6ಕ್ಕಿಂತ ಹೆಚ್ಚು ಒಳ ಮೀಸಲಿನ ನಿರೀಕ್ಷೆಯಲ್ಲಿದೆ. ಆದರೆ, ಇದಕ್ಕೆ ಬಲಗೈ ಸಮುದಾಯಗಳ ಸ್ಪಂದನೆ ಹೇಗಿರಲಿದೆ ಎಂಬ ಕುತೂಹಲಕಾರಿಯಾಗಿದೆ.

ಏಕೆಂದರೆ, ಬಲಗೈ ಸಮುದಾಯಗಳು ಎಡಗೈ ಹಾಗೂ ಬಲಗೈ ನಡುವೆ ಮೀಸಲಾತಿ ಬಹುತೇಕ ಸಮನಾಗಿ ಹಂಚಿಕೆಯಾಗಬೇಕು ಎಂಬ ನಿಲುವು ಹೊಂದಿವೆ. ಹೀಗಾಗಿ ಆ.7 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹೊರ ಬೀಳಲಿರುವ ಅಂಕಿ-ಅಂಶಗಳ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಇತ್ತೀಚೆಗೆ ಒಳ ಮೀಸಲಾತಿ ಜಾರಿ ಕುರಿತು ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಫಾರಸಿನ ಸ್ವರೂಪ ತಿಳಿದುಕೊಂಡ ನಂತರ ಈ ವರದಿ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ ಎಂಬ ನಿಲುವು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಆಯೋಗದ ಮೀಸಲಾತಿ ಶಿಫಾರಸು ಗಮನಿಸಿದ ಬಳಿಕ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಕಾಂಗ್ರೆಸ್‌ನ ಎಡಗೈ ಹಾಗೂ ಬಲಗೈ ನಾಯಕರ ಮುಂದಿನ ನಡೆ ಏನಾಗಿರಲಿದೆ ಎಂಬುದು ಕುತೂಹಲಕರ.

7ಕ್ಕೆ ಸಂಪುಟದಲ್ಲಿ ತೀರ್ಮಾನ- ಸಿಎಂ:

ಸೋಮವಾರ ಬೆಳಗ್ಗೆ ನಿವೃತ್ತ ನ್ಯಾ. ನಾಗಮೋಹನ್‌ದಾಸ್‌ ಅವರ ಏಕಸದಸ್ಯ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 1,766 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿತು. ಈ ವೇಳೆ ಸಚಿವರಾದ ಡಾ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಶಿವರಾಜ್‌ ತಂಗಡಗಿ ಸೇರಿದಂತೆ ಹಲವು ನಾಯಕರು ಹಾಜರಿದ್ದರು.ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಒಳ ಮೀಸಲಾತಿ ಕುರಿತ ವರದಿ ಸ್ವೀಕರಿಸಿದ್ದೇನೆ. ಆ.7 ರಂದು ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ ಮಾಡುತ್ತೇವೆ. ವರದಿಯಲ್ಲಿನ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ಆರೋಪ ವ್ಯಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

1.07 ಕೋಟಿ ಜನರ ಸಮೀಕ್ಷೆ- ನ್ಯಾ। ದಾಸ್‌:

ನ್ಯಾ. ನಾಗಮೋಹನ್‌ ದಾಸ್‌ ಮಾತನಾಡಿ, ಒಳ ಮೀಸಲಾತಿ ಕಲ್ಪಿಸಲು ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ನನ್ನ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. 2025 ಮಾ.27 ರಂದು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ನಿಖರ, ಸ್ಪಷ್ಟವಾದ ದತ್ತಾಂಶದ ಕೊರತೆ ಇದೆ ಎಂಬ ಕಾರಣ ನೀಡಿ ಹೊಸದಾಗಿ ಒಂದು ಸಮೀಕ್ಷೆ ಅವಶ್ಯಕತೆ ಇದೆ ಎಂದು ನಾವು ಮಧ್ಯಂತರ ವರದಿ ನೀಡಿದ್ದೆವು. ಅದೇ ದಿನ ಸಚಿವ ಸಂಪುಟ ತೀರ್ಮಾನ ಮಾಡಿ ಹೊಸ ಸಮೀಕ್ಷೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಮೇ 5 ರಿಂದ ಜುಲೈ 6 ರಂದು ಅಂದರೆ ಸುಮಾರು 60 ದಿನಗಳ ಕಾಲ ಮನೆ-ಮನೆ ಸಮೀಕ್ಷೆ ನಡೆಸಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ ಬಳಸಿ ಸಮೀಕ್ಷೆ ನಡೆಸಿದ್ದೇವೆ. ಈ ಸಮೀಕ್ಷೆಯಲ್ಲಿ 27 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಪರಿಶೀಲನೆ ನಡೆಸಿದ್ದು, 1,07,01,982 ರಷ್ಟು ಜನ ಸಮೀಕ್ಷೆಯಲ್ಲಿ ದಾಖಲಾಗಿದ್ದಾರೆ. ವರದಿ, ದತ್ತಾಂಶ ಹಾಗೂ ಅನುಬಂಧ ಸೇರಿ ಒಟ್ಟು 1,766 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುಪ್ರೀಂ ಮಾನದಂಡ ಅನ್ವಯ ಮೀಸಲು- ಆಯೋಗ:

‘ಒಳ ಮೀಸಲಾತಿ ವರ್ಗೀಕರಣಕ್ಕೆ ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡ ಪರಿಗಣಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆ ಮಾನದಂಡಗಳ ಆಧಾರದಲ್ಲಿಯೇ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ನ್ಯಾ. ನಾಗಮೋಹನ್‌ ದಾಸ್‌ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು 2025ರ ಮಾ.27ರಂದು ಆಯೋಗದಿಂದ ಮಧ್ಯಂತರ ವರದಿ ಸಲ್ಲಿಸಿದ್ದೆವು. ಅದೇ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯ ಕೈಗೊಂಡಿತ್ತು. ಅದರಂತೆ 60 ದಿನಗಳ ಕಾಲ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಆಯೋಗದ ಅಧ್ಯಕ್ಷರಾದ ಎಚ್.ಎನ್‌. ನಾಗಮೋಹನ್‌ದಾಸ್‌ ಅವರು ಯಾವುದೇ ಸಂಭಾವನೆ ಅಥವಾ ಗೌರವಧನ ಪಡೆದಿಲ್ಲ ಎಂದು ಆಯೋಗವು ತಿಳಿಸಿದೆ.

ಸಮೀಕ್ಷೆ ನಡೆಸಿದ್ದ ಅವಧಿ: 60 ದಿನ (ಮೇ.5 ರಿಂದ ಜು.6)

ಸಮೀಕ್ಷೆಗೆ ಒಳಪಟ್ಟ ಎಸ್ಸಿ ಕುಟುಂಬ: 27,24,768

ಸಮೀಕ್ಷೆಯಲ್ಲಿ ಭಾಗಿಯಾದ ಜನ: 1,07,01,982 (1.07 ಕೋಟಿ)

ಒಳ ಮೀಸಲಾತಿ ಹಿನ್ನೆಲೆಯೇನು?

ಪರಿಶಿಷ್ಟ ಜಾತಿಯಲ್ಲಿನ ಎಡಗೈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಸರ್ಕಾರಿ ಸವಲತ್ತುಗಳಿಂದ ವಂಚನೆಗೆ ಒಳಗಾಗಿವೆ ಎಂದು 30 ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ 2005 ರಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ ರಚನೆಯಾಗಿ ಡಿ.ವಿ. ಸದಾನಂದ ಗೌಡ ಅವರ ಸರ್ಕಾರಕ್ಕೆ 2012 ರಲ್ಲಿ ವರದಿ ಸಲ್ಲಿಕೆಯಾಗಿತ್ತು. ಆದರೆ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರ ವಿವಿಧ ಕಾರಣ ನೀಡಿ ತಿರಸ್ಕಾರ ಮಾಡಿತ್ತು.

ಆದರೂ ಒಳ ಮೀಸಲಾತಿ ಆಗ್ರಹಿಸಿ ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ ದಲಿತ ಸಂಘಟನೆಗಳು ಹೋರಾಟ ಮುಂದುವರೆಸಿದ್ದವು.

ಪರಿಣಾಮ 2024 ಆ.1 ರಂದು ದವಿಂದರ್‌ಸಿಂಗ್‌ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌, ‘ಉಪ ವರ್ಗೀಕರಣ ಮಾಡಲು ಸಂವಿಧಾನದ ಅನುಚ್ಛೇದ 14ರಲ್ಲಿ ಅವಕಾಶವಿದೆ. ಉಪ ವರ್ಗೀಕರಣ ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿದೆ’ ಎಂದು ಹೇಳಿತ್ತು. ಜತೆಗೆ ಅಗತ್ಯ ದತ್ತಾಂಶ ಸಂಗ್ರಹಿಸಿ ಒಳಜಾತಿಗಳ ವರ್ಗೀಕರಣ ಮಾಡಬೇಕು ಎಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು. ಆಯೋಗವು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸಿ ದತ್ತಾಂಶ ಸಹಿತ ಇದೀಗ ವರದಿ ಸಲ್ಲಿಕೆ ಮಾಡಿದೆ.

ವರದಿಯಲ್ಲೇನಿದೆ? ಗೊತ್ತಿಲ್ಲ

ಐತಿಹಾಸಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾರೆ. ವರದಿಯಲ್ಲಿ ಏನೆಲ್ಲ ಅಂಶಗಳಿವೆ ಎಂಬುದು ಗೊತ್ತಿಲ್ಲ‌. ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದಾಗಲೇ ನಮಗೆ ವಿಷಯ ಗೊತ್ತಾಗಲಿದೆ. ಬಳಿಕ ಚರ್ಚಿಸಿ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ.

- ಡಾ.ಜಿ. ಪರಮೇಶ್ವರ್‌, ಗೃಹ ಸಚಿವರು

ವೈಜ್ಞಾನಿಕವಾಗಿ ಒಳಮೀಸಲು

ನಾಗಮೋಹನ್‌ದಾಸ್‌ ಆಯೋಗವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ನೀಡಿದೆ. 4-5 ದಿನಗಳಲ್ಲಿ ಸಂಪುಟ ಸಭೆಗೆ ಮಂಡಿಸಲಿದ್ದಾರೆ. ಬಳಿಕ ಪರಿಗಣಿಸಿ ನಿರ್ಧಾರ ಮಾಡುತ್ತೇವೆ. ಯಾರಾದರೂ ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೂ ತಡೆಯಾಜ್ಞೆ ಸಿಗಬಾರದು. ಆ ನಿಟ್ಟಿನಲ್ಲಿ ವೈಜ್ಞಾನಿಕ, ಕಾನೂನು ಬದ್ಧವಾಗಿ ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ.

- ಪ್ರಿಯಾಂಕ್‌ ಖರ್ಗೆ, ಸಚಿವರು

ನ್ಯಾ। ದಾಸ್‌ ಆಯೋಗದಿಂದ

ಸಿಎಂಗೆ ಒಳಮೀಸಲು ವರದಿ

- ನಾಡಿದ್ದು ಸಚಿವ ಸಂಪುಟ ಸಭೆಯಲ್ಲಿ ಮಂಡನೆ

- ವರದಿ ಜಾರಿ ಬಗ್ಗೆ ಅಂದು ಮಹತ್ವದ ನಿರ್ಧಾರ

ಹಂಚಿಕೆ ಸಾಧ್ಯತೆ

ಎಡಗೈ: 6.5%

ಬಲಗೈ: 5.5%

ಸ್ಪೃಶ್ಯರು: 4%

ಅಲೆಮಾರಿ, ಇತರರು: 1%

ಒಟ್ಟು ಎಸ್ಸಿ ಮೀಸಲು: 17%

Read more Articles on