ಸಾರಾಂಶ
- ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗೊಲ್ಲ: ಶ್ರೀರಾಮುಲು - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಒಂದುವೇಳೆ ಅಂತಹ ಪರಿಸ್ಥಿತಿ ಬಂದರೆ ಇದೇ ಸಿದ್ದರಾಮಯ್ಯ ಸರ್ಕಾರವನ್ನು ಕೆಡವುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿದರು.ನಗರದಲ್ಲಿ ಸೋಮವಾರ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ನಡೆಯುತ್ತಲೇ ಇದೆ. ಎಂತಹದ್ದೇ ಪರಿಸ್ಥಿತಿ ಬಂದರೂ ಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಬಿಡುವುದಿಲ್ಲ ಎಂದು ನವದೆಹಲಿಯಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಡಿಕೆಶಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಯಕೆ:ನಮ್ಮ ಪಕ್ಷ ಅವಕಾಶ ನೀಡಿದರೆ ನಮ್ಮೆಲ್ಲಾ ನಾಯಕರನ್ನೂ ಒಗ್ಗೂಡಿಸುವೆ ಎನ್ನುವ ಮೂಲಕ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾಗುವ ಆಸೆ ಪರೋಕ್ಷವಾಗಿ ವ್ಯಕ್ತಪಡಿಸಿದರು. ಭಿನ್ನಮತೀಯರು ಯಾರು ಯಾರಿದ್ದಾರೋ ಎಲ್ಲರನ್ನೂ ಒಂದು ಮಾಡುತ್ತೇನೆ. ಆದಷ್ಟು ಬೇಗನೆ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಬಳಿಕ ರಾಜ್ಯಾಧ್ಯಕ್ಷರ ನೇಮಕ ನಡೆಯಲಿದೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ನಮ್ಮ ನಾಯಕರು, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಒಂದಾಗಲು ಎಲ್ಲ ನಾಯಕರ ಸಹಕಾರವೂ ಇದೆ. ವಿ.ಸೋಮಣ್ಣ ಸಹಕಾರವಿದೆ. ಬಿ.ಎಸ್. ಯಡಿಯೂರಪ್ಪನವರ ಸಹಕಾರವೂ ಇದೆ ಎಂದು ರೆಡ್ಡಿ-ರಾಮುಲುಗೆ ಒಂದು ಮಾಡಿದ ನನಗೆ ಒಳ್ಳೆಯ ಗಿಫ್ಟ್ ಕೊಟ್ಟರೆಂಬ ಸೋಮಣ್ಣ ಹೇಳಿಕೆಗೂ ಅವರು ಪ್ರತಿಕ್ರಿಯಿಸಿದರು.ಮುಂಬರುವ ದಿನಗಳಲ್ಲಿ ಬಿಜೆಪಿ ವರಿಷ್ಠರು ನನಗೆ ಅವಕಾಶ ನೀಡಿದರೆ ಎಲ್ಲರನ್ನೂ ಒಗ್ಗೂಡಿಸುವೆ. ರಾಜ್ಯದ 224 ಕ್ಷೇತ್ರಗಳಲ್ಲೂ ನಮ್ಮೆಲ್ಲಾ ನಾಯಕರನ್ನೂ ಒಗ್ಗೂಡಿಸುವೆ ಎಂದು ರಮೇಶ ಜಾರಕಿಹೊಳಿ-ವಿಜಯೇಂದ್ರರನ್ನೂ ಒಂದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮುಲು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಆಸೆಯನ್ನು ಬಿಚ್ಚಿಟ್ಟರು.
ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ, ಟಿಂಕರ್ ಮಂಜಣ್ಣ, ಜಿಲ್ಲಾ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ ಇತರರು ಇದ್ದರು.- - -
-4ಕೆಡಿವಿಜಿ1: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿದರು.