ಸಾರಾಂಶ
ಬೆಂಗಳೂರು : ಮನುಷ್ಯ ಜೀವನದ ಮೇಲೆ ಪ್ರಕೃತಿ ಹಾಗೂ ಜೀವ ಸಂಕುಲಗಳು ಹೇಗೆ ಪ್ರಭಾವ ಬೀರಿವೆ ಮತ್ತು ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಭಾನುವಾರ ನಗರದ ಲಯನ್ಸ್ ಫ್ರಾನ್ಸಿಸ್ ಡಿ ಕೇಂದ್ರದಲ್ಲಿ ಲೇಖಕಿ ಧೀಮಂತಿನಿ ಶರ್ಮಾ ಅವರ ‘ಬರ್ಡ್ ಥೆರಪಿ ಫಾರ್ ಹ್ಯುಮನ್ ವೆಲ್ ಬೀಯಿಂಗ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪರಿಸರವನ್ನು ಕಾಪಾಡಬೇಕು, ನೈಸರ್ಗಿಕ ವಿಕೋಪ ಹಾಗೂ ಹವಾಮಾನ ವೈಪರಿತ್ಯದಲ್ಲಿ ನಿಸರ್ಗದ ಪಾತ್ರ ಪ್ರಮುಖವಾದುದು. ಹೀಗಾಗಿ ಸಾರ್ವಜನಿಕರು, ಸರ್ಕಾರ ಪ್ರಕೃತಿ ಉಳಿವಿಗೆ ಕೈಜೋಡಿಸಬೇಕು ಎಂದರು.
ಮನುಷ್ಯನ ಸ್ವಾರ್ಥ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಿಂದ ಅದೆಷ್ಟೋ ಪಕ್ಷಿಗಳು ಹಾಗೂ ಪಕ್ಷಿಧಾಮಗಳು ಕಣ್ಮರೆಯಾಗಿವೆ. ಪ್ರಕೃತಿ ಸೊಬಗನ್ನು ಹೆಚ್ಚಿಸುವ ನೂರಾರು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಅವುಗಳ ಸಂರಕ್ಷಣೆ ಮತ್ತು ಸಂತಾನೊತ್ಪತ್ತಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ಮೈಸೂರು ರಾಜಮನೆತನ ಉತ್ತಮ ಆಳ್ವಿಕೆಗೆ ಮಾತ್ರ ಹೆಸರಾಗದೇ, ಪರಿಸರವನ್ನು ಪ್ರೀತಿಸಿ, ಗೌರವಿಸುವ ಜೊತೆಗೆ ಪರಿಸರ ಉಳಿವಿಗೂ ಅವರ ಕೊಡುಗೆ ಅಪಾರ ಎಂದು ಹೇಳಿದರು. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ಪಕ್ಷಿಗಳು ಈ ಮೊದಲು ಎಲ್ಲಾ ಕಡೆ ಕಾಣಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅನೇತ ಪಕ್ಷಿ ಪ್ರಭೇದಗಳು ನಾಶವಾಗುತ್ತಿವೆ. ನಗರದಲ್ಲಿ ಕಾಣಿಸುತ್ತಿದ್ದ ಪಕ್ಷಿಗಳನ್ನು ನೋಡಲು ನಾವೀಗ ಹೊರ ವಲಯಕ್ಕೆ ಹೋಗಬೇಕಾದ ದುಸ್ಥಿತಿ ಬಂದಿದೆ.
ಮಾನವನ ಸ್ವಾರ್ಥವೇ ಇದಕ್ಕೆ ಮೂಲ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.ಜೆಸಿಆರ್‌ಡಬ್ಲ್ಯೂ ಸಂಸ್ಥಾಪಕಿ ಕಾಮಾಕ್ಷಿ ದೇವಿ ಒಡೆಯರ್ ಮಾತನಾಡಿ, ಪಕ್ಷಿ ವೀಕ್ಷಣೆ ಎನ್ನುವುದು ಧ್ಯಾನಸ್ಥ ಅಭ್ಯಾಸವಾಗಿದೆ. ಇದು ಪಂಚೇಂದ್ರಿಯಗಳನ್ನು ಆಕರ್ಷಿಸುತ್ತದೆ. ಪಕ್ಷಿಗಳ ಇಂಚರ ಆಲಿಸುವುದು, ಗರಿಗಳ ಬಣ್ಣ ಮತ್ತು ಮಾದರಿಗಳನ್ನು ವೀಕ್ಷಣೆ ಮತ್ತು ಅವುಗಳ ಸಂಕೀರ್ಣ, ಸೂಕ್ಷ್ಮ ನಡವಳಿಕೆಗಳನ್ನು ಗಮನಿಸುವುದು ಬರ್ಡ್ ಥೆರಪಿಯ ಪ್ರಮುಖ ಲಕ್ಷಣವಾಗಿದೆ. ಪಕ್ಷಿ ವೀಕ್ಷಣೆ ಮತ್ತು ಸಂಬಂಧವು ಮಾನವನ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಧೀಮಂತಿನಿ ಅವರ ಪುಸ್ತಕದಲ್ಲಿ ಬರ್ಡ್ ಥೆರಪಿ ಬಗ್ಗೆ ಪರಿಣಾಮಕಾರಿ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
)
;Resize=(128,128))
;Resize=(128,128))