ಸಾರಾಂಶ
ಮೈಸೂರಿನ ಇತಿಹಾಸ ತಿಳಿದಿದ್ದರೂ ಹಿರಿಯ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ಅಡಿಗಲ್ಲನ್ನು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರಿನ ಇತಿಹಾಸ ತಿಳಿದಿದ್ದರೂ ಹಿರಿಯ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ಅಡಿಗಲ್ಲನ್ನು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ಸಿನವರಿಗೆ ಮೈಸೂರಿನ ಮಹಾರಾಜರಿಗೆ ಅಪಮಾನ ಮಾಡುವುದರಲ್ಲಿ ಅದೇನು ತೃಪ್ತಿ ಸಿಗುತ್ತದೋ, ಸಂತೋಷ ನೀಡುತ್ತದೋ ಅರ್ಥವಾಗುತ್ತಿಲ್ಲ ಎಂದರು.ಕಾಂಗ್ರೆಸ್ಸಿನವರು ಅನೇಕ ಸಂದರ್ಭದಲ್ಲಿ ಕೃಷ್ಣರಾಜ ಒಡೆಯರ್, ಮಹಾರಾಜರಿಗೆ ಅವಮಾನ ಮಾಡುವುದನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಟಿಪ್ಪು ಸುಲ್ತಾನ್ 1799ರಲ್ಲೇ ಯುದ್ಧದಲ್ಲಿ ಸೋತ ಮೇಲೆ ಪ್ರಾಣ ಕಳಕೊಂಡಿದ್ದರು. 1902ರ ನಂತರದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಲು ಚಿಂತನೆ ಆರಂಭವಾಗಿತ್ತು. 1910ರಲ್ಲಿ ಮದ್ರಾಸ್ ಸರ್ಕಾರ ಇತ್ತು. ಆಗ ಮಹಾರಾಜರು ಪ್ರಯತ್ನ ಮಾಡಿದಾಗ ಅವರಿಗೆ ಅವಮಾನ ಆಗಿತ್ತು. 1911-12ರಲ್ಲಿ ಅಂದಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಹೋರ್ಡಿಂಗ್ ಅನುಮತಿ ನೀಡಿದ್ದರು. 1931ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣಗೊಂಡಿತ್ತು ಎಂದು ವಿವರಿಸಿದರು.ಇಷ್ಟೆಲ್ಲ ಗೊತ್ತಿದ್ದರೂ ಮೈಸೂರು ಭಾಗದವರಾದ ಮಹದೇವಪ್ಪ ಅವರು ಇತಿಹಾಸವನ್ನು ತಿರುಚುವ ಕೆಲಸವನ್ನು ಯಾಕೆ ಮಾಡುತ್ತಿದ್ದಾರೆ? ಯಾಕೆ ಪದೇ ಪದೇ ಮಹಾರಾಜರ ಮನೆತನಕ್ಕೆ ಅಪಮಾನ ಮಾಡುವುದನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ? ಈಚೆಗೆ ಪುಣ್ಯಾತ್ಮ ವಿಧಾನಪರಿಷತ್ ಸದಸ್ಯ ಯತೀಂದ್ರ ಅವರೂ ಸಿದ್ದರಾಮಯ್ಯ ಮೈಸೂರು ರಾಜರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆಂದು ತಿಳಿಸಿದ್ದರು. ಈ ರೀತಿ ಸಿದ್ದರಾಮಯ್ಯ, ಯತೀಂದ್ರ, ಎಚ್.ಸಿ.ಮಹದೇವಪ್ಪ ಅವರು ಅಪಮಾನ ಮಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಕೃಷ್ಣರಾಜ ಸಾಗರ ಅಣೆಕಟ್ಟು ಆಗಬೇಕಾದರೆ, ಅಂದಿನ ಮಹಾರಾಜರ ತಾಯಿಯವರು ಮುಂಬೈಗೆ ತೆರಳಿ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಅಣೆಕಟ್ಟು ಕಟ್ಟಲು ಅನುಕೂಲ ಮಾಡಿಕೊಟ್ಟಿದ್ದರು ಎಂಬುದು ಇತಿಹಾಸ. ಕಾಂಗ್ರೆಸ್ಸಿಗರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲದರಲ್ಲೂ ಮುಸಲ್ಮಾನರ ಓಲೈಕೆಯೇ ನಡೆದಿದೆ ಎಂದು ಹರಿಹಾಯ್ದರು.