ಸಾರಾಂಶ
ರಾಜ್ಯದ ವಿವಿಧ ಜಿಲ್ಲೆಯ ಪುರುಷರು ಹಾಗೂ ಮಹಿಳೆಯರು ಸೇರಿ 81 ತಂಡ ಹಾಗೂ 1300 ಕ್ರೀಡಾ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಗುರುವಾರ ಲೀಗ್ ಹಂತ ಪಂದ್ಯಗಳು ನಡೆದಿದ್ದು 3 ದಿನ ಪಂದ್ಯಾವಳಿ ನಡೆಯಲಿವೆ.
ಹುಬ್ಬಳ್ಳಿ:
ಇಲ್ಲಿಯ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಥ್ರೋಬಾಲ್ 2023-24 ಪಂದ್ಯಾವಳಿಗೆ ಗುರುವಾರ ಚಾಲನೆ ದೊರೆಯಿತು.ರಾಜ್ಯದ ವಿವಿಧ ಜಿಲ್ಲೆಯ ಪುರುಷರು ಹಾಗೂ ಮಹಿಳೆಯರು ಸೇರಿ 81 ತಂಡ ಹಾಗೂ 1300 ಕ್ರೀಡಾ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಗುರುವಾರ ಲೀಗ್ ಹಂತ ಪಂದ್ಯಗಳು ನಡೆದಿದ್ದು 3 ದಿನ ಪಂದ್ಯಾವಳಿ ನಡೆಯಲಿವೆ. ಪಂದ್ಯಾವಳಿಗೆ ಚಾಲನೆ ನೀಡಿದ ಮೇಯರ್ ರಾಮಣ್ಣ ಬಡಿಗೇರ, ಕ್ರೀಡೆಯಿಂದ ಮನುಷ್ಯ ದೈಹಿಕ ಹಾಗೂ ಮಾನಸಿಕ ಸದೃಢವಾಗಲು ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಗುರಿ ಹಾಗೂ ಸಾಧನೆಗಳ ಮಹತ್ವದ ಅರಿವಾಗುತ್ತದೆ. ಸಾಧಿಸಬೇಕೆಂಬ ಛಲ ಹೆಚ್ಚುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಮಾತನಾಡಿದರು. ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗೌರೀಶ ಅಸೂಟಿ, ಕ್ರೀಡಾಧ್ಯಕ್ಷ ಡಾ. ರಾಮ ತೇಗೂರ, ಸಂಸ್ಥೆಯ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಇದ್ದರು.