ಸಾರಾಂಶ
ಕೊಪ್ಪ: ಮೇಗುಂದ ಹೋಬಳಿಯಲ್ಲೂ ಧಾರಾಕಾರ ಮಳೆ ಮುಂದುವರಿದಿದ್ದು ಗಾಳಿಯ ರಭಸಕ್ಕೆ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಹೊಸ್ತೋತದಲ್ಲಿ ನಡೆದಿದೆ. ಶಿಡ್ಲೆಮನೆ ರತ್ನಾಕರ (೩೮) ಮೃತ ದುರ್ಧೈವಿ. ಬಾಡಿಗೆಗೆ ತೆರಳಿ ವಾಪಾಸು ಮನೆಗೆ ತೆರಳುವಾಗ ಬೃಹತ್ ಗಾತ್ರದ ಮಾವಿನ ಮರ ಆಟೋದ ಮೇಲೆ ಬಿದ್ದಿದೆ. ದೊಡ್ಡ ಮರದ ಕೊಂಬೆ ಬಿದ್ದ ಪರಿಣಾಮ ಆಟೋ ನುಜ್ಜುಗುಜ್ಜಾಗಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಜಯಪುರ ಪಿಎಸ್‌ಐ ಅಂಬರೀಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂರ್ಯದೇವಸ್ಥಾನದ ಕುಂಬಾರಕೊಪ್ಪ ಗ್ರಾಮದ ಗುಬ್ಬುಗದ್ದೆಯ ವಿಠಲ್ ಶೆಟ್ಟಿ ಅವರ ಕೊಟ್ಟಿಗೆ ಮೇಲೆ ಸಂಜೆ ಮರ ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ. ಯಾವುದೇ ಜಾನುವಾರುಗಳಿಗೆ ಹಾನಿಯಾಗಿಲ್ಲ. ವಿಠಲ್ ಶೆಟ್ಟಿ ತಲೆಗೆ ಸ್ವಲ್ಪ ಪೆಟ್ಟಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಪ್ಪ ಪಟ್ಟಣ ಸೇರಿದಂತೆ ತಾಲೂಕಿನ ಬಸ್ರಿಕಟ್ಟೆ, ಹರಿಹರಪುರ, ಜಯಪುರ, ಕಮ್ಮರಡಿ ಭಾಗಗಳಲ್ಲಿ ಗಾಳಿ ಸಹಿತ ನಿರಂತರ ಮಳೆ ಮುಂದುವರಿದಿದೆ.
ಕೊಪ್ಪ ೭೦ ಮಿ.ಮೀ, ಹರಿಹರಪುರ ೮೪ ಮಿ.ಮೀ, ಜಯಪುರ ೬೨.೨ ಮಿ.ಮೀ., ಕಮ್ಮರಡಿ ೧೧೬.೨ ಮಿ.ಮೀ, ಬಸ್ರಿಕಟ್ಟೆ ೩೬.೬೯ ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.