ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ತೆಕ್ಕಟ್ಟೆ ಸಮೀಪ ಗುಡ್ಡಅಂಗಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಓರ್ವ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಕೀರ್ತಿ (25) ಮೃತರು. ಕಾರಿನಲ್ಲಿದ್ದ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಎಂಬವರು ಗಾಯಗೊಂಡಿದ್ದಾರೆ.
ಪ್ರಯಾಣಿಕರೆಲ್ಲರೂ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು, ಮುರ್ಡೇಶ್ವರ, ಗೋಕರ್ಣದ ಕಡೆಗೆ ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು.ಅಪಘಾತವಾದ ಸಂದರ್ಭ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಶೆಟ್ಟಿ ಚಿಟ್ಟೆಬೈಲು, ಮೊಳಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಲಾಲ್ ಅವರು ಗಾಯಾಳುಗಳನ್ನು ತಮ್ಮ ಕಾರುಗಳ ಮೂಲಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
------ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಹರ್ಷಿತ್ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಾ.೧೩ರಂದು ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.ಮಂಗಳೂರಿನ ವಾಮಂಜೂರು ಮೂಲದ ಯುವತಿ ಮತ್ತು ಪುತ್ತೂರಿನ ಯುವಕ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕವಿದ್ದು, ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಯುವಕನ ಸ್ನೇಹಿತರಿಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ಯುವತಿಯ ನಂಬರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಪುತ್ತೂರಿಗೆ ಕರೆಸಿಕೊಂಡಿದ್ದರು.ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.೧೩ರಂದು ಪುತ್ತೂರಿಗೆ ಬಂದಾಗ ಆರೋಪಿ ಯುವಕರಿಬ್ಬರು ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು. ಅಲ್ಲಿ ಓರ್ವ ಯುವತಿಯನ್ನು ಹೊರಗೆ ಕುಳ್ಳಿರಿಸಿ ಇನ್ನೊಬ್ಬಳನ್ನು ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಆರೋಪಿ ಯುವಕರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದು, ಸಂತ್ರಸ್ತೆ ಯುವತಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಪುತ್ತೂರು ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.ದೂರು ಸ್ವೀಕರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಆರೋಪಿಗಳಿಗೆ ಬಾಡಿಗೆ ಮನೆ ನೀಡಿ ಆಶ್ರಯ ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪೈಕಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಮನು ಯಾನೆ ಮನ್ವಿತ್‌ಗೆ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಮತ್ತೋರ್ವ ಪ್ರಮುಖ ಆರೋಪಿ ಹರ್ಷಿತ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.