ಸಾರಾಂಶ
- ದುಡಿಮೆ ಇಲ್ಲದೇ ಆರ್ಥಿಕ ಸಮಸ್ಯೆ: ಸಂಸದೆ ಬಳಿ ಅಳಲು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಆಟೋ ರಿಕ್ಷಾಗಳಿಗೆ ಸಿಎನ್‌ಜಿ ಗ್ಯಾಸ್ ಸಿಗದೇ 2-3 ದಿನಗಳಿಂದ ತೀವ್ರ ತೊಂದರೆಯಾಗುತ್ತಿದೆ. ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸಿ ದಾವಣಗೆರೆ ಸ್ಮಾರ್ಟ್ ಸಿಟಿ ಆಟೋ ಚಾಲಕರ ಸಂಘದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಗೃಹ ಕಚೇರಿ ಎದುರು ಸಂಘದ ನೇತೃತ್ವದಲ್ಲಿ ಆಟೋ ರಿಕ್ಷಾ ಮಾಲೀಕರು, ಚಾಲಕರು ಪ್ರತಿಭಟಿಸಿದರು. ಜಿಲ್ಲಾ ಕೇಂದ್ರದಲ್ಲಿ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು.
ಸಂಘದ ಅಧ್ಯಕ್ಷ ವಿ.ಮಂಜುನಾಥ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸಿಎನ್‌ಜಿ ಗ್ಯಾಸ್ ಸೇವೆ ಆರಂಭವಾಗಿ 3 ವರ್ಷ ಕಳೆದರೂ ಇಂದಿಗೂ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಕೇವಲ 3 ಮಾತ್ರ ಇವೆ. ಮೂರೂ ಬಂಕ್‌ಗಳಿಗೆ ಸರಿಯಾಗಿ ಲೋಡ್ ತಲುಪಿಲ್ಲ. ಪರಿಣಾಮ ಆಟೋ ರಿಕ್ಷಾ, ಇತರೆ ಸಿಎನ್‌ಜಿ ವಾಹನಗಳು ನಿತ್ಯ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದರು.ಬೇರೆ ಜಿಲ್ಲೆಗಳೇ ಗತಿ:
ಪ್ರಸ್ತತ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಆಟೋಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಸಿಎನ್‌ಟಿ ಆಟೋ ರಿಕ್ಷಾಗಳ ಸಂಖ್ಯೆಯೇ 2 ಸಾವಿರಕ್ಕೂ ಅಧಿಕ ಇದೆ. ಜೊತೆಗೆ ಕಾರು, ಟಾಟಾ ಏಸ್, ದ್ವಿಚಕ್ರ ವಾಹನಗಳು, ಬಸ್‌ಗಳಿಗೂ ಸಿಎನ್‌ಜಿ ಗ್ಯಾಸ್ ತುಂಬಿಸಲು ಹರಿಹರ ನಗರ, ನೆರೆಯ ರಾಣೇಬೆನ್ನೂರು, ಹಾವೇರಿಗಳಿಗೆ ಹೋಗಿ, ಆಟೋಗಳಿಗೆ ಗ್ಯಾಸ್ ತುಂಬಿಸಿಕೊಂಡು ಬರಬೇಕಾದ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.ದುಡಿಮೆಗೆ ಕಲ್ಲು:
ದಾವಣಗೆರೆಯಲ್ಲಿ ಸಿಎನ್‌ಜಿ ಗ್ಯಾಸ್ ಸಿಗದೇ ಕೆಲ ಆಟೋ ರಿಕ್ಷಾ ಚಾಲಕರು ದುಡಿಮೆ ಮಾಡಲಾಗುತ್ತಿಲ್ಲ. ಆಟೋಗಳನ್ನು ಮನೆಗಳ ಮುಂದೆ ನಿಲ್ಲಿಸಿಕೊಂಡು, ಪರಿತಪಿಸುವಂತಾಗಿದೆ. ಮಕ್ಕಳ ಶಾಲಾ-ಕಾಲೇಜು ಶುಲ್ಕ, ಕುಟುಂಬ ನಿರ್ವಹಣೆ, ಮನೆ ಮಂದಿ ಆಸ್ಪತ್ರೆ, ಖರ್ಚು ವೆಚ್ಚ, ಮನೆ ಬಾಡಿಗೆ, ವಾಹನ ಇಎಂಐ, ಸಾಲದ ಕಂತು ಕಟ್ಟಲಾಗದೇ ಚಾಲಕರು, ಮಾಲೀಕರು ಪರದಾಡುತ್ತಿದ್ದಾರೆ ಎಂದು ಅವಲತ್ತುಕೊಂಡರು.ಸಿಎನ್‌ಜಿ ಗ್ಯಾಸ್ ಬಂಕ್ ಸಮಸ್ಯೆ ತೀವ್ರವಾಗುತ್ತಿದೆ. ನಿತ್ಯವೂ ಚಾಲಕರು ಸಿಎನ್‌ಜಿ ಗ್ಯಾಸ್ ಭರ್ತಿಗಾಗಿ ಬಂಕ್ ಮುಂದೆ ಹಗಲಿರುಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಶಾಬನೂರು ರಸ್ತೆ, ಹಳೇ ಪಿ.ಬಿ. ರಸ್ತೆ, ಡಿಸಿ ಸರ್ಕಲ್, ಬೂದಾಳ್ ರಸ್ತೆಯಲ್ಲಿ ತಲಾ 2ರಂತೆ ಇನ್ನೂ ಹೆಚ್ಚು ಕಡೆ ಸಿಎನ್‌ಜಿ ಗ್ಯಾಸ್ ಬಂಕ್‌ಗಳನ್ನು ಸ್ಥಾಪಿಸಬೇಕಾದ ಅವಶ್ಯಕತೆ ಹೆಚ್ಚಿದೆ. ಆದಷ್ಟು ಬೇಗನೇ ಗ್ಯಾಸ್ ಬಂಕ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರಿಗೆ ವಾಹನಗಳ ಚಾಲಕರು ಕೋರಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಅಣ್ಣಪ್ಪ ಸ್ವಾಮಿ, ಎಸ್.ಕೊಟ್ರೇಶಪ್ಪ, ಎಚ್.ಆರ್.ರಾಘವೇಂದ್ರ, ರೇವಣಸಿದ್ದಪ್ಪ, ಕೆ.ಜಿ.ಗಂಗಪ್ಪ, ಎಚ್.ನಾಗರಾಜ, ಕೆ.ಆರ್.ಅರುಣಕುಮಾರ ಇತರರು ಇದ್ದರು.- - -
-18ಕೆಡಿವಿಜಿ2:ದಾವಣಗೆರೆ ನಗರದಲ್ಲಿ ಆಟೋ ರಿಕ್ಷಾಗಳಿಗೆ ಸಿಎನ್‌ಜಿ ಗ್ಯಾಸ್ ಸಿಗದೇ 2-3 ದಿನಗಳಿಂದ ತೀವ್ರ ತೊಂದರೆಯಾಗುತ್ತಿದ್ದು, ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸಿ ಶುಕ್ರವಾರ ಸ್ಮಾರ್ಟ್ ಸಿಟಿ ಆಟೋ ಚಾಲಕರ ಸಂಘದಿಂದ ಪ್ರತಿಭಟಿಸಲಾಯಿತು.