ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿವಾಹನ ಚಾಲಕರು ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ನಗರದ ಹಿರಿಯ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಹೇಳಿದರು.
ಅವರು ಸೋಮವಾರ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ, ಅಪಘಾತದಲ್ಲಿ ಮರಣ ಹಾಗೂ ತ್ರೀವತರ ಹಾನಿ ಉಂಟಾದ ಕುಟುಂಬ ವರ್ಗದವರು ಸಂಕಷ್ಟ ಅನುಭವಿಸುವುದು ನಾವು ಕಾಣುತ್ತಿದ್ದೇವೆ. ರಸ್ತೆ ಸುರಕ್ಷತೆ ನಿಯಮಗಳನ್ನು ಸಾರ್ವಜನಿಕರು ಚಾಚು ತಪ್ಪದೇ ಪಾಲಿಸುವುದರೊಂದಿಗೆ ರಸ್ತೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ರವಿಶಂಕರ್, ಚಾಲಕರು ಸದಾ ರಸ್ತೆಯ ಎಡಬದಿಯಲ್ಲಿ ಚಲಿಸಬೇಕು, ವಿರುದ್ಧ ದಿಕ್ಕಿನಲ್ಲಿ ಚಲಿಸಬಾರದು, ಚಾಲನೆಯಲ್ಲಿ ಮೊಬೈಲ್ ಬಳಸಬಾರದು. ಸಾರ್ವಜನಿಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಸುರಕ್ಷಿತ ಚಾಲನೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ದಂತವೈದ್ಯ ಡಾ.ವಿಜಯೇಂದ್ರ, ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದ್ದು ನಿಯಮಿತವಾಗಿ ವಾಹನಗಳನ್ನು ತಪಾಸಣೆ ಮಾಡಿಸಿ ಸುಸ್ಥಿತಿಯಲ್ಲಿಟ್ಟುಕೊಂಡು, ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸುವಂತೆ ಸಲಹೆ ಮಾಡಿದರು.ಈ ಸಂದರ್ಭ ರಸ್ತೆ ಸುರಕ್ಷತೆ ಕುರಿತು ಕಿರು ಚಿತ್ರವನ್ನು ಪದರ್ಶಿಸಿಲಾಯಿತು. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕೈಪಿಡಿಯನ್ನು ಮತ್ತು ರಸ್ತೆ ಸುರಕ್ಷತೆ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ಪ್ರಸಾದ್ ನೇತ್ರಾಲಯದಿಂದ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಭಾಸ್ಕರ್ ರಾವ್ ಪೇತ್ರಿ, ಕಚೇರಿಯ ಅಧೀಕ್ಷಕ ಪಮಿತ, ಡಾ.ಅತುಲ್, ಡಾ.ವಿಜೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಕಚೇರಿಯ ಶಾಂತರಾಜು ಸ್ವಾಗತಿಸಿದರು. ಸಂತೋಷ್ ಶೆಟ್ಟಿ ನಿರೂಪಿಸಿದರು. ಸುಧಾಂಶು ವಂದಿಸಿದರು.