ಕನ್ನಡಪ್ರಭ ವಾರ್ತೆ ಕಲಬುರಗಿ
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶರಣಬಸವ ವಿವಿಯಲ್ಲಿ ಕರ್ನಾಟಕ ಬ್ಯಾಂಕ್‌ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ₹೧೨.೯೮ ಲಕ್ಷ ನೆರವಿನಿಂದ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುತ್ತಿದೆ.ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ, ಕರ್ನಾಟಕ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಮಲ್ಲನಗೌಡ ಬಿರಾದಾರ್ ಅವರು ₹೧೨.೯೮ ಲಕ್ಷ ಚೆಕ್ ಶರಣಬಸವ ವಿವಿ ಕುಲಾಧಿಪತಿ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ ೯ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಸೇರಿದಂತೆ ವಿವಿ ಅಧಿಕಾರಿಗಳು ಉಪಸ್ಥಿತರಿದ್ದರು.ಕರ್ನಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶಶಿಕಿರಣ, ಕ್ಲಸ್ಟರ್ ಮುಖ್ಯಸ್ಥ, ಮುಖ್ಯ ವ್ಯವಸ್ಥಾಪಕ ಕುಲಕರ್ಣಿ, ಆರ್‌ಎಲ್‌ಪಿಎಸ್‌ಸಿ ಮುಖ್ಯ ವ್ಯವಸ್ಥಾಪಕ ಜಿ. ಸೋಮಶೇಖರ್, ಶಾಖಾ ವ್ಯವಸ್ಥಾಪಕ ಆರ್.ಡಿ. ಗುರುರಾಜ ಉಪಸ್ಥಿತರಿದ್ದರು.
ಸಂಪೂರ್ಣ ಸಜ್ಜಿತ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸಲು ಕರ್ನಾಟಕ ಬ್ಯಾಂಕ್ ತನ್ನ ಸಿಎಸ್‌ಆರ್ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ನೀಡಿರುವ ೧೨.೯೮ ಲಕ್ಷ ರೂಪಾಯಿಗಳ ಅನುದಾನಕ್ಕಿಂತ ಹೆಚ್ಚಿನ ಹಣ ವೆಚ್ಚವಾಗಲಿರುವುದರಿಂದ, ಉಳಿದ ಅಗತ್ಯ ವೆಚ್ಚವನ್ನು ಶರಣಬಸವ ವಿಶ್ವವಿದ್ಯಾಲಯವೇ ಭರಿಸಿ, ತನ್ನ ಮುಖ್ಯ ಆವರಣದಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸಲಿದೆ.
ಡ್ರೋನ್ ಪ್ರಯೋಗಾಲಯ ಸ್ಥಾಪನೆಗಾಗಿ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಕರ್ನಾಟಕ ಬ್ಯಾಂಕ್‌ನ ಅಧಿಕಾರಿಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ವಿವಿಯಲ್ಲಿ ಸ್ಥಾಪನೆಯಾಗಲಿರುವ ಡ್ರೋನ್ ಪ್ರಯೋಗಾಲಯವು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಸಂಶೋಧನೆ ಮತ್ತು ನವೋದ್ಯಮ, ಕೌಶಲ್ಯಾಭಿವೃದ್ಧಿ ಹಾಗೂ ಪಠ್ಯಕ್ರಮ ಆಧಾರಿತ ತಾಂತ್ರಿಕ ತರಬೇತಿಗೆ ಮಹತ್ತರ ಕೊಡುಗೆ ನೀಡಲಿದೆ. ಅತ್ಯಾಧುನಿಕ ತಾಂತ್ರಿಕ ಪ್ರಯೋಗಾಲಯಗಳೊಂದಿಗೆ ಡ್ರೋನ್ ಪ್ರಯೋಗಾಲಯವು ತಂತ್ರಜ್ಞಾನ ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದೆ.ಈ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಎಐ ಆಧಾರಿತ ಡಿಜಿಟಲ್ ಸ್ವಯಂಚಾಲನಾ ತಂತ್ರಜ್ಞಾನದಲ್ಲಿನ ಪ್ರಾಯೋಗಿಕ ಬೆಳವಣಿಗೆಗಳನ್ನು ಅರಿತುಕೊಳ್ಳಲಿದ್ದು, ಮಾನವರಹಿತ ವೈಮಾನಿಕ ವಾಹನಗಳ ಪರಿಕಲ್ಪನೆ, ಕಾರ್ಯವಿಧಾನ ಹಾಗೂ ಅದಕ್ಕೆ ಸಂಬಂಧಿಸಿದ ಅಲ್ಗಾರಿದಮ್‌ಗಳ ಕುರಿತು ಪ್ರಾಯೋಗಿಕ ಜ್ಞಾನವನ್ನು ಪಡೆಯಲಿದ್ದಾರೆ. ಈ ಡ್ರೋನ್ ಪ್ರಯೋಗಾಲಯದಿಂದ, ಆರಂಭಿಕ ಹಂತದಲ್ಲಿಯೇ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಹಾಗೂ ಎನರ್ಜಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ೧,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರ ಪ್ರಯೋಜನ ಪಡೆಯಲಿದ್ದಾರೆ.