ಹೊಸದಾಗಿ ಕೆಪಿಎಸ್‌ ಮ್ಯಾಗನೆಟ್‌ ಶಾಲೆ ತೆರೆಯಲು ಸರ್ಕಾರ ನಿರ್ಧರಿಸಿದೆ. ಆದರೆ, ಕೆಪಿಎಸ್‌ ಶಾಲೆ ತೆರೆಯುವ ಕುರಿತು ನಿಯಮ ಉಲ್ಲಂಘಿಸಿರುವುದು ಖಂಡನೀಯ. ಇದರಿಂದ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳೆಲ್ಲ ಮುಚ್ಚುತ್ತವೆ ಎಂದು ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ:

ಅವೈಜ್ಞಾನಿಕ ಹಾಗೂ ನಿಯಮಬಾಹಿರವಾಗಿ ಕೆಪಿಎಸ್‌ (ಕರ್ನಾಟಕ ಪಬ್ಲಿಕ್‌ ಶಾಲೆ) ಶಾಲೆಗಳನ್ನಾಗಿ ಪರಿವರ್ತಿಸುವುದನ್ನು ಕೈಬಿಡುವಂತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಹೊಸದಾಗಿ ಕೆಪಿಎಸ್‌ ಮ್ಯಾಗನೆಟ್‌ ಶಾಲೆ ತೆರೆಯಲು ಸರ್ಕಾರ ನಿರ್ಧರಿಸಿದೆ. ಆದರೆ, ಕೆಪಿಎಸ್‌ ಶಾಲೆ ತೆರೆಯುವ ಕುರಿತು ನಿಯಮ ಉಲ್ಲಂಘಿಸಿರುವುದು ಖಂಡನೀಯ. ಇದರಿಂದ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳೆಲ್ಲ ಮುಚ್ಚುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳೆಂದರೆ 1ರಿಂದ 12ನೇ ತರಗತಿ ವರೆಗೆ ಒಂದೇ ಕಾಂಪೌಂಡ್‌ನಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಇರಬೇಕು. ಇದರ ಆಡಳಿತದ ಜವಾಬ್ದಾರಿ ಪ್ರಾಚಾರ್ಯರೊಬ್ಬರದೇ ಇರಬೇಕು. ಇದು 2018ರಲ್ಲಿ ಸರ್ಕಾರ ಹೊರಡಿಸಿರುವ ನಿಯಮ.

ಆದರೆ, ಇದೀಗ ಕೆಲವೆಡೆ ಕಿರಿಯ ಪ್ರಾಥಮಿಕ ಶಾಲೆಗಳಿದ್ದರೆ, ಹಿರಿಯ ಪ್ರಾಥಮಿಕ ಶಾಲೆ ಮತ್ತೊಂದು ಕಡೆ, ಪ್ರೌಢಶಾಲೆ ಇನ್ನೊಂದು ಕಡೆ ಮತ್ತು ಕಾಲೇಜು ಮಗದೊಂದು ಕಡೆ. ಈ ರೀತಿ ಸಮೀಪದಲ್ಲಿ ಇರುವುಗಳನ್ನೆಲ್ಲ ಸೇರಿಸಿಕೊಂಡು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಸಮಂಜಸವಲ್ಲ. ಇದಕ್ಕೆ ಉದಾಹರಣೆಯೆಂದರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಉನ್ನತೀಕರಿಸಿ 8ನೇ ತರಗತಿ ಪ್ರಾರಂಭಿಸಲಾಗುತ್ತಿದೆ. ಕೆಪಿಎಸ್ ಶಾಲೆಗಳ ಉದ್ದೇಶಕ್ಕೆ ಹಾಗೂ ನಿಯಮಗಳಿಗೆ ಇದು ಸಮಂಜಸವಾಗಿಲ್ಲ ಎಂದು ಹೇಳಿದ್ದಾರೆ.

ಇದೇ ರೀತಿ ರಾಣಿಬೆನ್ನೂರು ತಾಲೂಕಿನ ಉಕ್ಕುಂದ, ಅಸುಂಡಿ, ಕಜ್ಜರಿ ಗ್ರಾಮಗಳಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಉನ್ನತೀಕರಿಸಿ 8ನೇ ತರಗತಿ ಪ್ರಾರಂಭಿಸಲಾಗುತ್ತಿದೆ. ಇದನ್ನು ತಡೆ ಹಿಡಿಯಬೇಕು. ಮೂಲ ನಿಯಮಗಳನ್ನು ಗಾಳಿಗೆ ತೂರಿ, ಬೇರೆ ಬೇರೆ ಅಂತರದಲ್ಲಿರುವ ಶಾಲೆಗಳನ್ನು ಒಗ್ಗೂಡಿಸಿ "ಕೆಪಿಎಸ್ " ಶಾಲೆಗಳನ್ನಾಗಿ ಘೋಷಿಸಲು ಹೊರಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕೆಪಿಎಸ್ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಶಕಗಳಿಂದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಅನುದಾನಿತ ಮತ್ತು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗುತ್ತಿದೆ. ಅನುದಾನಿತ ಶಾಲೆಗಳು ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಿಸುವಂತಾಗಿದೆ. ಅಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿಯ ಭವಿಷ್ಯ ಆತಂಕಕ್ಕೆ ಸಿಲುಕಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.

ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ, ಸರ್ಕಾರಿ ಪ್ರಾಥಮಿಕ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆ ಉನ್ನತೀಕರಿಸುವ ಕಾರ್ಯವನ್ನು ಕೈಬಿಡಬೇಕು. ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಲ್ಲದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಇನ್ಮುಂದೆ ಯಾವುದೇ ಶಾಲೆಯನ್ನು ಉನ್ನತೀಕರಿಸಲು ಮತ್ತು ಹೊಸ ಶಾಲೆ ಪ್ರಾರಂಭಿಸಲು ಅನುಮತಿ ನೀಡುವ ಇಲಾಖೆಯು ಹೊರಡಿಸಿರುವ ನಿಯಮ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ.