ದಾಸರಹಳ್ಳಿ ಕ್ಷೇತ್ರದಲ್ಲಿ ನೀರಿಗೆ ತೀವ್ರ ಹಾಹಾಕಾರ; ಟ್ಯಾಂಕರ್‌ ನೀರಿನ ಅವಲಂಬನೆ

| Published : Feb 20 2024, 01:46 AM IST / Updated: Feb 20 2024, 01:04 PM IST

ದಾಸರಹಳ್ಳಿ ಕ್ಷೇತ್ರದಲ್ಲಿ ನೀರಿಗೆ ತೀವ್ರ ಹಾಹಾಕಾರ; ಟ್ಯಾಂಕರ್‌ ನೀರಿನ ಅವಲಂಬನೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ ತೀವ್ರಗೊಂಡಿರುವ ನೀರಿನ ಹಾಹಾಕಾರದಿಂದ ಜನರು ನೀರನ್ನು ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ.ಈ ಬಾರಿ ಮಳೆ ಸರಿಯಾಗಿ ಆಗದ ಕಾರಣ ಐದಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಶಾಂತ್ ಕೆಂಗನಹಳ್ಳಿ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಕ್ಷೇತ್ರದಲ್ಲಿ ತೀವ್ರಗೊಂಡಿರುವ ನೀರಿನ ಹಾಹಾಕಾರದಿಂದ ಜನರು ನೀರನ್ನು ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ.ಈ ಬಾರಿ ಮಳೆ ಸರಿಯಾಗಿ ಆಗದ ಕಾರಣ ಐದಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. 

ಜಲ ಮಂಡಳಿಯು ವಾರದಲ್ಲಿ ಎರಡು ಬಾರಿ ಕಾವೇರಿ ನೀರು ಪೂರೈಸುತ್ತಿತ್ತು. ಆದರೆ ಈಗ ಒಂದು ವಾರ ಕಳೆದರೂ ನೀರು ಬರುತ್ತಿಲ್ಲ. ಜಲ ಮಂಡಳಿ ಎಂಜಿನಿಯರ್‌ಗಳು ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

ಇತ್ತಿಚಿಗೆ ಬೆಂಗಳೂರು ಜಲಮಂಡಳಿ ಚೇರ್ಮನ್ ಡಾ। ರಾಮ್ ಪ್ರಸಾತ್ ಮನೋಹರ್ ಹಾಗೂ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಅವಲತ್ತುಕೊಂಡಿದ್ದರು.

ಕ್ಷೇತ್ರದ ಗಣಪತಿ ನಗರ, ಗೆಳೆಯರ ಬಳಗ, ಕಿರ್ಲೋಸ್ಕರ್ ಬಡಾವಣೆ, ಮಂಜುನಾಥ ನಗರ, ಬಾಗಲಗುಂಟೆ ಅಂದಾನಪ್ಪ ಲೇಔಟ್ ಶೆಟ್ಟಿಹಳ್ಳಿ, ಮಲ್ಲಸಂದ್ರ ಚೊಕ್ಕಸಂದ್ರ ಹೆಗ್ಗನಹಳ್ಳಿ, ರಾಜಗೋಪಾಲನಗರ, ಪೀಣ್ಯ ಕೈಗಾರಿಕಾ ಪ್ರದೇಶ ಚಿಕ್ಕಬಾಣಾವಾರ ಪುರಸಭೆ ಇನ್ನು ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಸಿದೆ.

ಕೆಲವು ಭಾಗಗಳಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದು ಕೊಳವೆಬಾವಿಗಳು ಬತ್ತಿವೆ. ಇನ್ನು ಕೆಲವೇ ಕೆಲವು ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸದ್ಯಕ್ಕೆ ಅವುಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. 

ಸಾಕಷ್ಟು ಬಡಾವಣೆಗಳಲ್ಲಿ ನೀರಿನ ಟ್ಯಾಂಕರ್‌ಗಳನ್ನು ಜನರು ಅವಲಂಬಿಸಿದ್ದಾರೆ. ಈ ಭಾಗದ ಹೋಟೆಲ್ ಮಾಲೀಕರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. 

ಮನೆ ಮಾಲೀಕರು ಸಹ ಬಾಡಿಗೆದಾರರಿಗೆ ದುಬಾರಿ ದರ ನೀಡಿ ಟ್ಯಾಂಕರ್ ನೀರು ಖರೀದಿಸಬೇಕಾದ ಸ್ಥಿತಿ ಎದುರಾಗಿದೆ. ಕೆಲವು ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದಾರೆ.

100 ಕೊಳವೆ ಬಾವಿಗೆ ಮನವಿ: ಮುನಿರಾಜು

ನಮ್ಮ ಕ್ಷೇತ್ರದ ಅನೇಕ ಕಡೆ ನೀರಿನ ಅಭಾವವಿದೆ. ಕೊಳವೆ ಬಾವಿಗಳು ಬತ್ತಿವೆ. ಕೆಲವು ಕಡೆ ಕೊಳವೆ ಬಾವಿ ಕೊರೆಸಿ ನೀರು ಪೂರೈಸಿದ್ದೇವೆ. ಜುಲೈ ಒಳಗೆ ಕಾವೇರಿ ನೀರು ಬರುತ್ತದೆ. 

ಅಲ್ಲಿಯವರೆಗೂ ನೀರನ್ನು ಮಿತವಾಗಿ ಬಳಸಬೇಕು. ಗ್ರಾಮಗಳಿಗೆ ನೂತನವಾಗಿ 25 ಕೊರೆಸಲಾಗುತ್ತಿದೆ. ಇನ್ನೂ100 ಕೊಳವೆಬಾವಿ ಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ನಮಗೆ ಕಾವೇರಿ ನೀರು ಬರುತ್ತಿಲ್ಲ ವಾರಕ್ಕೊಮ್ಮೆ ಬೋರ್ವೆಲ್ ನೀರು ಬಿಡುತ್ತಾರೆ. ಅದು ಸರಿಯಾಗಿ ಬರಲ್ಲ. ಮಳೆಗಾಲದಲ್ಲಿ ಬೋರ್ವೆಲ್‌ಗಳಲ್ಲಿ ನೀರು ಜಾಸ್ತಿ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಆಗ ನೀರಿಗಾಗಿ ಪರದಾಡಬೇಕಾಗುತ್ತದೆ - ಸಂಪೂರ್ಣ, ಮಲ್ಲಸಂದ್ರ ನಿವಾಸಿ.

ಮಂಜುನಾಥನಗರದ ತೆಂಗಿನತೋಟದ ರಸ್ತೆಯಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ನೀರಿನ ಸಮಸ್ಯೆ ಜಾಸ್ತಿ ಇದ್ದ ಕಾರಣ ಕೊಳವೆಬಾವಿ ಕೊರೆಯಿಸಿ ಅಲ್ಲಿನ ಸುತ್ತಮುತ್ತಲ ಜನರಿಗೆ ನೀರು ಪೂರೈಸಲಾಯಿತು - ಭರತ್ ಸೌಂದರ್ಯ, ಅಧ್ಯಕ್ಷ, ನಕ್ಷತ್ರ ಫೌಂಡೇಶನ್