ಬರಪರಿಹಾರ ಕೊಡದೆ ಸರ್ಕಾರದ ನಾಟಕ: ಜೆಡಿಎಸ್‌

| Published : Nov 18 2023, 01:00 AM IST

ಸಾರಾಂಶ

ರಾಜ್ಯದಲ್ಲಿ ಎದುರಾಗಿರುವ ಬರಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಪರಿಹಾರ ನೀಡಿ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದರು.

ಮಂಡ್ಯ: ರಾಜ್ಯದಲ್ಲಿ ಎದುರಾಗಿರುವ ಬರಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಪರಿಹಾರ ನೀಡಿ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದರು.

ಶುಕ್ರವಾರ ತಾಲೂಕಿನ ಬಸರಾಳು ಹೋಬಳಿಯ ಹನಗನಹಳ್ಳಿ, ದುದ್ದ ಹೋಬಳಿಯ ಬೆಟ್ಟಹಳ್ಳಿ, ಪುರದ ಕೊಪ್ಪಲು ಸೇರಿ ವಿವಿಧೆಡೆ ಬರ ಅಧ್ಯಯನ ನಡೆಸಿದ ದಳಪತಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ, ರೈತರ ಸಂಕಷ್ಟಗಳ ಕುರಿತಂತೆ ಮಾಹಿತಿ ಸಂಗ್ರಹಿಸಿದರು.

ಬರ ನಿರ್ವಹಣೆಯಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ಜವಾಬ್ದಾರಿಯನ್ನು ನಿರ್ವಹಿಸದೆ ಕೈಕಟ್ಟಿ ಕುಳಿತಿದೆ. ಬೆಳೆ ಇಲ್ಲದೆ ಕಂಗೆಟ್ಟಿರುವ ರೈತರ ನೋವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದು, ತುರ್ತು ಬರಪರಿಹಾರ ಹಣ ಬಿಡುಗಡೆ ಮಾಡದೆ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಆ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ, ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ ಎಂದು ಮೂದಲಿಸಿದರು.

ವಸ್ತುಸ್ಥಿತಿಯನ್ನು ಅವಲೋಕಿಸಿಲ್ಲ:

ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕನ ಮಾಡಬೇಕಿತ್ತು. ಅದರ ಆಧಾರದ ಮೇಲೆ ನೈಜ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಹವಾನಿಯಂತ್ರಿಕ ಕೊಠಡಿಯಲ್ಲಿ ಸಿದ್ಧಪಡಿಸಿದ ವರದಿಯನ್ನು ತರಿಸಿಕೊಂಡು ಕೇಂದ್ರಕ್ಕೆ ಕಳುಹಿಸಿದೆ. ಆದರೆ, ವಾಸ್ತವದಲ್ಲಿ ಬರಪರಿಸ್ಥಿತಿಯ ಚಿತ್ರಣವೇ ಬೇರೆ ಇದೆ. ರೈತರನ್ನು ಭೇಟಿಯಾದಾಗ ವಿದ್ಯುತ್ ಸಮಸ್ಯೆ, ಕೆರೆ-ಕಟ್ಟೆಗಳು ತುಂಬಿಲ್ಲದಿರುವುದು, ನೀರಿಲ್ಲದೆ ಬೆಳೆಗಳು ಒಣಗಿರುವುದು, ಕೆಆರ್‌ಎಸ್, ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಹಾಕದಿರುವುದು ಕಂಡುಬಂದಿದೆ. ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುತ್ತಿರುವ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಇಷ್ಟೊತ್ತಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿತ್ತು. ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಆರೋಪಿಸಿದರು.

ರಾಜ್ಯಸರ್ಕಾರ ಆರ್ಥಿಕ ದಿವಾಳಿ:

ಶಾಸಕ ಸುರೇಶ್‌ಗೌಡ ಮಾತನಾಡಿ, ಬರಪರಿಸ್ಥಿತಿ ಕುರಿತಂತೆ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ನೈಜ ವರದಿ ಸಲ್ಲಿಸಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ವಾಸ್ತವ ವರದಿಯನ್ನು ಕಳುಹಿಸಿದ್ದರೆ ಈ ವೇಳೆಗೆ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡುತ್ತಿತ್ತು ಎಂದು ದೂರಿದರು.

ರೈತರ ಸಂಕಷ್ಟಕ್ಕಿಂತ ವರ್ಗಾವಣೆಯಿಂದ ಹಣ ಮಾಡುವುದರಲ್ಲೇ ಕಾಂಗ್ರೆಸ್ಸಿಗರು ಮುಳುಗಿಹೋಗಿದ್ದಾರೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ಬರ ಪರಿಹಾರಕ್ಕೆ ನಮ್ಮ ಬಳಿ ದುಡ್ಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದೆ. ವಸ್ತು ಸ್ಥಿತಿಯನ್ನೇ ಅಧ್ಯಯನ ಮಾಡದೆ ಕಾಲ್ಪನಿಕ ವರದಿ ಸಿದ್ಧಪಡಿಸಿಕೊಟ್ಟಿರುವುದರಿಂದೆಲೇ ಕೇಂದ್ರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳ ತಂಡ ರೈತರ ಜಮೀನುಗಳಿಗೆ ಹೋಗಿ ಸಮೀಕ್ಷೆ ಮಾಡಿದ್ದಾರಾ, ಶಾಸಕರು, ಸಚಿವರು ರೈತರನ್ನು ಖುದ್ದು ಭೇಟಿಯಾಗಿ ವರದಿ ಸಿದ್ದಪಡಿಸಿದ್ಧಾರಾ. ಕೃಷಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಯಾವ ಊರಿಗೆ ಹೋಗಿ ಸಮೀಕ್ಷೆ ಮಾಡಿದ್ದಾರೆ, ಅವರ ಸ್ವಗ್ರಾಮದ ಪಕ್ಕದ ಊರಿಗೂ ಹೋಗಿಲ್ಲ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರ ಪಾಪರ್ ಚೀಟಿ ಸರ್ಕಾರವಾಗಿದ್ದು, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಜನರು ಉತ್ತರ ನೀಡಲಿದ್ದಾರೆ. ಕೆರೆ ಕಬಳಿಸಿರುವ ಸಚಿವ ಚಲುವರಾಯಸ್ವಾಮಿ ವಿರುದ್ಧ ತನಿಖೆ ಮಾಡಲಿ. ಆಗ ಆತನ ಅಸಲಿತನ ಗೊತ್ತಾಗಲಿದೆ. ಕೆರೆಯನ್ನು ಯಾರಿಗಾದರೂ ಮಂಜೂರು ಮಾಡಿಕೊಡಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.

ಸಚಿವ ಚಲುವರಾಯಸ್ವಾಮಿ ಕಂಪ್ಯೂಟರ್ ಪರಿಣಿತರು. ಅವರು ಕಟ್ ಅಂಡ್ ಫೇಸ್ಟ್‌ನಲ್ಲಿ ನಿಸ್ಸೀಮರು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ಪ್ರಕರಣ ಕುರಿತು ಹೇಳಿರುವ ಮಾತಿಗೆ ವ್ಯಂಗ್ಯವಾಡಿದರು.

ಶ್ವೇತಪತ್ರ ಹೊರಡಿಸಲಿಕಾಂಗ್ರೆಸ್ ಸರ್ಕಾರ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲವೆಂದು ಕಾಲಹರಣ ಮಾಡುವುದು ಬೇಡ. ಪರಿಹಾರ ಹಣ ಬಿಡುಗಡೆಗೆ ಕೇಂದ್ರದ ಮೇಲೆ ಜೆಡಿಎಸ್ ಒತ್ತಡ ಹಾಕಲಿ ಎನ್ನುವವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಕೆ.ಸುರೇಶ್‌ಗೌಡ ಆಗ್ರಹಿಸಿದರು.ಅಧಿವೇಶನದಲ್ಲಿ ಪಕ್ಷದ ಶಾಸಕರು ಧ್ವನಿ ಎತ್ತುತ್ತಾರೆಕೃಷಿ ಅಧಿಕಾರಿಗಳ ತಂಡವೂ ರೈತರನ್ನು ಖುದ್ದು ಭೇಟಿಯಾಗಿಲ್ಲ, ಜಮೀನುಗಳಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿಲ್ಲ, ಒಣಗಿರುವ ಬೆಳೆಗಳನ್ನು ಕಂಡಿಲ್ಲ ಆದರೂ ಸಹ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಬರ ಪರಿಸ್ಥಿತಿ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪಕ್ಷದ ಶಾಸಕರು ದನಿ ಎತ್ತಲಿದ್ದಾರೆ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಎಂದು ತಿಳಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಆರೋಪ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿಕೃತ ಮನಸ್ಸಿನ ಕಾಂಗ್ರೆಸ್ಸಿಗರು ರಾಜಕೀಯ ತೆವಲಿಗಾಗಿ ಮಾತನಾಡುತ್ತಿದ್ದು, ಇಡೀ ಸರ್ಕಾರವೇ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿ ಹಣ ಮಾಡುವ ದಂಧೆಯಲ್ಲಿ ನಿರತವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಡಿ.ಸಿ ತಮ್ಮಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ರವಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಾತನೂರು ಜಯರಾಂ, ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಜಯರಾಂ, ಕೆಂಚನಹಳ್ಳಿ ಪುಟ್ಟಸ್ವಾಮಿ ಇತರರಿದ್ದರು.