ಸಾರಾಂಶ
ರಾಜ್ಯದಲ್ಲಿ ಉಂಟಾದ ಬರ ಪರಿಸ್ಥಿತಿಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕೈಕೊಟ್ಟಿದ್ದು ಸರ್ಕಾರದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುವ ರೈತರ ಪ್ರಮಾಣ ಅರ್ಧಕ್ಕರ್ಧ ಕುಸಿತವಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಉಂಟಾದ ಬರ ಪರಿಸ್ಥಿತಿಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕೈಕೊಟ್ಟಿದ್ದು ಸರ್ಕಾರದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುವ ರೈತರ ಪ್ರಮಾಣ ಅರ್ಧಕ್ಕರ್ಧ ಕುಸಿತವಾಗಿದೆ.
2022-23ರಲ್ಲಿ ಭಾರೀ ಮಳೆಯಿಂದಾಗಿ ಫಸಲು ಕೈಕೊಟ್ಟಿದ್ದರೂ ಎಂಎಸ್‌ಪಿ ಅಡಿ ರಾಗಿ, ಭತ್ತ, ಜೋಳ ಮಾರಾಟಕ್ಕೆ 3,91,899 ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿದ್ದರು. ಆದರೆ ಈ ಬಾರಿ ತೀವ್ರ ಬರಗಾಲದಿಂದಾಗಿ 1,72,697 ರೈತರಷ್ಟೇ ನೋಂದಣಿ ಮಾಡಿಸಿದ್ದಾರೆ. ಇದು ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿರುವುದನ್ನು ಸೂಚಿಸುತ್ತದೆ.2022-23ರಲ್ಲಿ 3,04,737 ರೈತರಿಂದ 45,47,100 ಟನ್ ರಾಗಿ, 7,622 ರೈತರಿಂದ 2,05,850 ಟನ್ ಭತ್ತ ಹಾಗೂ 16,761 ರೈತರಿಂದ 7,67,030 ಟನ್ ಜೋಳವನ್ನು ಎಂಎಸ್‌ಪಿ ಅಡಿ ಖರೀದಿ ಮಾಡಲಾಗಿತ್ತು. ಒಟ್ಟಾರೆ 3,91,899 ರೈತರು ನೋಂದಣಿ ಮಾಡಿದ್ದರಾದರೂ ಅಂತಿಮವಾಗಿ 3,29,120 ಅನ್ನದಾತರು ಮಾತ್ರ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದರು. ಆಗ 55,19,980 ಟನ್ ಆಹಾರ ಧಾನ್ಯವನ್ನು ರೈತರು ಮಾರಾಟ ಮಾಡಿದ್ದರು.ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿ ಬೆಳೆ ಹಾನಿ ಉಂಟಾಗಿದ್ದರೂ ಒಂದಷ್ಟು ಫಸಲು ಬಂದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಎಂಎಸ್‌ಪಿ ಅಡಿ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದ್ದು ತೀವ್ರ ಬರಗಾಲದಿಂದಾಗಿ ರೈತರ ನೋಂದಣಿ ಬಹಳಷ್ಟು ಕಡಿಮೆಯಾಗಿದೆ. ಈಗ 1,64,561 ರೈತರು 37,58,766 ಟನ್ ರಾಗಿ, 118 ರೈತರು 3279 ಕ್ವಿಂಟಲ್ ಭತ್ತ ಹಾಗೂ 8018 ರೈತರು 3,27,597 ಟನ್ ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಒಟ್ಟಾರೆ 1,72,697 ರೈತರು ನೋಂದಣಿ ಮಾಡಿಸಿದ್ದು ರೈತರ ಸಂಖ್ಯೆ ಅರ್ಧಕ್ಕರ್ಧ ಕುಸಿದಂತಾಗಿದೆ. ಮತ್ತೊಂದೆಡೆ ನೋಂದಣಿ ಮಾಡಿಸಿದವರೆಲ್ಲಾ ಮಾರಾಟ ಮಾಡದಿರುವುದರಿಂದ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ.ಮಾರ್ಚ್ ಅಂತ್ಯದವರೆಗೂ ನೋಂದಣಿಗೆ ಅವಕಾಶವಿದೆ. ಈಗಾಗಲೇ ಎರಡು ತಿಂಗಳು ಕಾಲಾವಕಾಶ ಸಿಕ್ಕಿದ್ದರಿಂದ ಮುಂದಿನ ದಿನಗಳಲ್ಲಿ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ನೋಂದಣಿ ಆಗುವುದಿಲ್ಲ.ಕೃಷಿ ಉತ್ಪಾದನೆಗೆ ಬರದಿಂದ ಹಿನ್ನಡೆ
ಬರಗಾಲದಿಂದ ಉತ್ಪಾದನೆಗೆ ಒಂದಷ್ಟು ಹಿನ್ನಡೆಯಾಗಿದೆ. ಮತ್ತೊಂದೆಡೆ, ರೈತರು ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯ ಶೇಖರಿಸಿದ್ದಾರೆ. ಇದೂ ಸಹ ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯಲು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.- ಎನ್.ಚಲುವರಾಯಸ್ವಾಮಿ, ಕೃಷಿ ಸಚಿವಭತ್ತ ಬೆಳೆದವರು ಖರೀದಿ ಕೇಂದ್ರಕ್ಕಿಲ್ಲ
ಪ್ರತಿ ಕ್ವಿಂಟಲ್ ಎಂಎಸ್‌ಪಿ ದರವು ರಾಗಿಗೆ 3,846 ರು., ಭತ್ತಕ್ಕೆ 2,203 ಮತ್ತು ಜೋಳಕ್ಕೆ 3225 ರುಪಾಯಿ ಇದೆ. ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಅಧಿಕವಾಗಿರುವುದರಿಂದ ಭತ್ತ ಬೆಳೆದ ರೈತರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ. ಜೋಳದ ಬೆಲೆಯೂ ಅಷ್ಟೇನೂ ಕಡಿಮೆ ಇಲ್ಲ. ರಾಗಿ ಮಾತ್ರ ಮಾರುಕಟ್ಟೆಯಲ್ಲೂ ಎಂಎಸ್‌ಪಿ ಬೆಲೆಯ ಆಸುಪಾಸಿನಲ್ಲಿದೆ. ಆದರೂ ಕಳೆದ ಸಾಲಿಗೆ ಹೋಲಿಸಿದರೆ ಸುಮಾರು 5 ಲಕ್ಷ ಕ್ವಿಂಟಲ್ ರಾಗಿ ಖರೀದಿ ಕಡಿಮೆಯಾಗುವ ಸಂಭವವಿದೆ.