ಧಾರವಾಡ:

ಬರಗಾಲದ ಪರಿಸ್ಥಿತಿ ಇರುವುದರಿಂದ ಎಲ್ಲ ಇಲಾಖೆಗಳು ಸಾರ್ವಜನಿಕರೊಂದಿಗೆ ಸಮನ್ವಯದಿಂದ ಸೇವೆ ಒದಗಿಸಬೇಕು ಎಂದು ಧಾರವಾಡ ಜಿಲ್ಲಾ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೂಚಿಸಿದರು.

ಜಿಪಂ ಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯಡಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಆರೋಗ್ಯ ಇಲಾಖೆಯಿಂದ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರ, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಡೇಂಘಿ ಹಾಗೂ ಮಲೇರಿಯಾ ನಿಯಂತ್ರಣ ಕ್ರಮ ಮತ್ತು ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗೃಹ ಆರೋಗ್ಯ ಯೋಜನೆಯಲ್ಲಿ ಪ್ರತಿ ಮನೆಗೆ ಅಂಗನವಾಡಿಯ ಆಶಾಕಾರ್ಯಕರ್ತೆಯರು ಭೇಟಿ ನೀಡಿ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ಗೃಹ ಆರೋಗ್ಯ ಶಿಬಿರವನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಮುಂಚೂಣಿಯಲ್ಲಿರಲಿ:


ಧಾರವಾಡ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಉತ್ತಮಗೊಂಡು ರಾಜ್ಯದಲ್ಲಿ ಮುಂಚೂಣಿ ಸ್ಥಾನ ಪಡೆಯಬೇಕು. ಶಾಲಾ ಮಕ್ಕಳಿಗಾಗಿ ನಿರಂತರ ಆ್ಯಪ್‌ನಲ್ಲಿ ಹಾಜರಾತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಪಠ್ಯಕ್ರಮದ ಅನುಷ್ಠಾನ ಕುರಿತು, ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಜಿಲ್ಲೆಯಿಂದ ವರ್ಗಾವಣೆಗೊಂಡ ವಿದ್ಯಾರ್ಥಿಗಳ ವಿವರ ಪಡೆದರು. ಬೇರೆ ಬೇರೆ ಜಿಲ್ಲೆಯಿಂದ ಕೋಚಿಂಗ್ ಪಡೆಯಲು ಬಂದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಆಗಿರುವ ಕೃಷಿ, ತೋಟಗಾರಿಕೆ ಬಿತ್ತನೆ ಪ್ರಮಾಣ, ಬಿತ್ತನೆ ಬೀಜ, ಗೊಬ್ಬರ ಹಾಗೂ ಮಳೆ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಕುಡಿಯುವ ನೀರಿನ ಸಮಸ್ಯೆಗಳಿಗೆ ಕೈಗೊಂಡ ಕ್ರಮಗಳನ್ನು ತಿಳಿಸಿದರು. ಬರಗಾಲ ಬಂದರೆ ಮೇವು, ಕುಡಿಯುವ ನೀರಿನ ಲಭ್ಯತೆ ಬಗ್ಗೆಯೂ ತಿಳಿಸಿದರು. ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಪಾಲಿಕೆ ರುದ್ರೇಶ್ ಘಾಳಿ, ಅರಣ್ಯ ಇಲಾಖೆಯ ಶೇಖ್ ಅಲಿಂ ಸಿದ್ದಿಕ್ಕಿ ಇದ್ದರು.

ಬೆಳೆ ಸಮೀಕ್ಷೆ...

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಗುರುವಾರ ನವಲಗುಂದ ಮತ್ತು ಅಣ್ಣಿಗೇರಿಯ ಕೆಲವು ಹೊಲಗಳಿಗೆ ಕೃಷಿ, ತೋಟಗಾರಿಕಾ ಅಧಿಕಾರಿಗಳೊಂದಿಗೆ ತೆರಳಿ ಬೆಳೆ ಸಮೀಕ್ಷೆ ಪರಿಶೀಲನೆ ನಡೆಸಿದರು. ಜಿಲ್ಲೆಯ ಬೆಳೆ, ಮಳೆ ಕುರಿತಾಗಿ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ಜಿಪಂ ಸಿಇಒ ಭುವನೇಶ ಪಾಟೀಲ ಇದ್ದರು.