ಕನ್ನಡಪ್ರಭ ವಾರ್ತೆ ಹಳಿಯಾಳ
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ನಿವೃತ್ತ ಯೋಧರೊಬ್ಬರು ಸಕಾಲದಲ್ಲಿ ಆ್ಯಂಬುಲೆನ್ಸ್ ದೊರೆಯದೇ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.ಪಟ್ಟಣದ ಕಾನ್ವೆಂಟ್ ಗಲ್ಲಿಯ ನಿವಾಸಿ ಬಸ್ತ್ಯಾಂವ್ ಸಂತಾನ ಬೃಗಾಂಜಾ (83) ಮೃತರು. ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅಂತ್ಯಸಂಸ್ಕಾರವು ಸೋಮವಾರ ನಡೆಯಲಿದೆ.
ಹೃದಯ ಸಂಬಂಧಿತ ಹಾಗೂ ಉಸಿರಾಟದ ಸಮಸ್ಯೆ ಹಿನ್ನೆಲೆ ಭಾನುವಾರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಪಡೆದ ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ಯಲು ಸೂಚಿಸಲಾಗಿತ್ತು. ಆದರೆ ಆ್ಯಂಬುಲೆನ್ಸ್ ಸೇವೆ ಸಕಾಲದಲ್ಲಿ ಲಭ್ಯವಿಲ್ಲದ ಕಾರಣ ತನ್ನ ತಂದೆ ಮೃತಪಟ್ಟಿದ್ದಾರೆ, ಆ್ಯಂಬುಲೆನ್ಸ್ ಸಿಕ್ಕರೆ ತಂದೆ ಬದುಕುಳಿಯುತ್ತಿದ್ದರು. ದೇಶ ಸೇವೆಗಾಗಿ ಶ್ರಮಿಸಿದ ಯೋಧರಿಗೆ ಇಂತಹ ಗತಿ ಬರಬಾರದಾಗಿತ್ತು ಎಂದು ಮೃತ ಯೋಧನ ಪುತ್ರ ಮನ್ವೇಲ್ ಬೃಗಾಂಜಾ ಹೇಳಿದ್ದಾರೆ.ಘಟನೆಯ ಈ ಕುರಿತು ಪ್ರತಿಕ್ರಿಯಿಸಿರುವ ಹಳಿಯಾಳ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣಕುಮಾರ ಹಲಗತ್ತಿ, ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ಯೋಧರಿಗೆ ಚಿಕಿತ್ಸೆ ನೀಡಲಾಗಿದೆ, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಅವರಿಗೆ ತಿಳಿಸಲಾಯಿತು. ನಮ್ಮ ಆಸ್ಪತ್ರೆಯಲ್ಲಿದ್ದ ಆ್ಯಂಬುಲೆನ್ಸ್ ಮಗುವನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗಿತ್ತು, ಹೀಗಿರುವಾಗ ಆ್ಯಂಬುಲೆನ್ಸ್‌ಗಾಗಿ ಯೋಧರ ಕುಟುಂಬದವರು 108ಕ್ಕೆ ಕರೆ ಮಾಡಿದ್ದಾರೆ. ಆದರೆ ಅವರು ಸಕಾಲದಲ್ಲಿ ಬಂದಿಲ್ಲವಂತೆ, ಹಳಿಯಾಳದಲ್ಲಿ ಹಲವಾರು ದಿನಗಳಿಂದ 108ಕ್ಕೆ ಆ್ಯಂಬುಲೆನ್ಸ್ ಸರಿಯಾಗಿ ಸಮಯಕ್ಕೆ ಸೇವೆಗೆ ಸ್ಪಂದಿಸುತ್ತಿಲ್ಲದ್ದಿದರಿಂದ ನಮಗೂ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ಗಂಭೀರ ವಿಷಯವನ್ನು ನಾನು ಮೇಲಧಿಕಾರಿಗಳ ಗಮನಕ್ಕೂ ತಂದಿರುವೆ ಎಂದು ತಿಳಿಸಿದ್ದಾರೆ.