ಬರ ಪರಿಹಾರ: ಕೇಂದ್ರ ಸರ್ಕಾರಕ್ಕೆ ಮುಖಭಂಗ: ಸಚಿವ ಈಶ್ವರ ಖಂಡ್ರೆ

| Published : Apr 24 2024, 02:17 AM IST

ಬರ ಪರಿಹಾರ: ಕೇಂದ್ರ ಸರ್ಕಾರಕ್ಕೆ ಮುಖಭಂಗ: ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ತೆರಿಗೆ ನಮ್ಮ ಹಕ್ಕು ವಿಚಾರದಲ್ಲೂ ರಾಜ್ಯಕ್ಕೆ ಶೀಘ್ರ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡುವಂತೆ ನಿರ್ದೇಶಿಸಲು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ, ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಮೋದಿ ಸರ್ಕಾರ ಹೇಳಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣ ನೀಡಿದ ಅವರು, ಈಗ ರಾಜ್ಯ ಬಿಜೆಪಿ ತನ್ನ ಸಾಮಾಜಿಕ ತಾಣದಲ್ಲಿ ಚುನಾವಣಾ ನೀತಿ ಸಂಹಿತೆಯ ನಡುವೆಯೂ ಚುನಾವಣೆ ಆಯೋಗದ ಅನುಮತಿ ಪಡೆದು ರಾಜ್ಯದ ಹಿತ ಕಾಯುತ್ತಿರುವ ಮೋದಿ ಸರ್ಕಾರ ಎಂದು ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಸ್ತಿ ಮಾಡುವಾಗ ಬಿದ್ದರೂ ತನ್ನ ಮೀಸೆ ಮಣ್ಣಾಗಲಿಲ್ಲ ಎಂದ ಎನ್ನುವಂತೆ, ಆಗಿರುವ ಮುಖಭಂಗ ಮರೆ ಮಾಚಿಕೊಳ್ಳಲು ಇಂತಹ ಪ್ರಚಾರ ಮಾಡುವ ಬಿಜೆಪಿಗೆ ಮತ್ತು ಅದನ್ನು ತಮ್ಮ ವಾಲ್‌ನಲ್ಲಿ ಹಾಕಿಕೊಳ್ಳುವ ಸಂಸದ ಭಗವಂತ ಖೂಬಾಗೆ ಕಿಂಚಿತ್ತೂ ನಾಚಿಕೆ ಇಲ್ಲವೇ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

ಬಿಜೆಪಿ ಸುಳ್ಳು ಪ್ರಚಾರಕ್ಕೆ ತಿರುಗೇಟು ನೀಡಿರುವ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಪರಿಹಾರ ಬಿಡುಗಡೆ ಮಾಡದೆ, ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಮನಗರ ರೋಡ್ ಶೋ ವೇಳೆ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ತಡವಾಗಿ ಮನವಿ ಸಲ್ಲಿಸಿತ್ತು, ಈಗ ಚುನಾವಣೆ ನೀತಿ ಸಂಹಿತೆ ಅಡ್ಡ ಬಂದಿದೆ ಎಂದು ಹಸಿ ಸುಳ್ಳು ಹೇಳಿದ್ದರು. ನಮ್ಮ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ ಮೊದಲ ನ್ಯಾಯ ಸಿಕ್ಕಿದೆ. ಬಿಜೆಪಿಗೆ ಮುಖಭಂಗ ಆಗಿದೆ ಎಂದು ಹೇಳಿದ್ದಾರೆ.

ನಮ್ಮ ತೆರಿಗೆ ನಮ್ಮ ಹಕ್ಕು ವಿಚಾರದಲ್ಲೂ ರಾಜ್ಯಕ್ಕೆ ಶೀಘ್ರ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಭೂತಪೂರ್ವ ಯಶಸ್ಸಿನಿಂದ ಬಿಜೆಪಿ ಭಯಭೀತವಾಗಿದೆ. ಕೇಂದ್ರದಿಂದ ನ್ಯಾಯ ಸಮ್ಮತವಾಗಿ ನೀಡಬೇಕಾದ ಬರ ಪರಿಹಾರದ ಹಣ ನೀಡದಿದ್ದರೂ ಸಿದ್ದರಾಮಯ್ಯ ಸರ್ಕಾರ ಅತ್ಯುತ್ತಮವಾಗಿ ಬರ ನಿರ್ವಹಣೆ ಮಾಡುತ್ತಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿ ಹಾಳು ಮಾಡುವ ಅವರ ಪ್ರಯತ್ನ ಫಲ ನೀಡಿಲ್ಲ ಎಂದು ತಿಳಿಸಿದ್ದಾರೆ.

ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, ರಾಜ್ಯದ ಜನತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.